ಮಂಗಳೂರು: ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ದೇವರಾಗಿ ಪೂಜಿಸಲಾಗುವುದಾದರೂ ಸೂರ್ಯ ದೇವನ ದೇಗುಲಗಳಿರುವುದು ವಿರಳ. ಮಂಗಳೂರು ನಗರದ ಮರೋಳಿ ಎಂಬಲ್ಲಿ ಸಾವಿರಾರು ವರ್ಷಗಳ ಹಳೆಯ ಇತಿಹಾಸ ಪ್ರಸಿದ್ಧ ಸೂರ್ಯದೇವನ ದೇಗುಲವಿದೆ.
ಮಂಗಳೂರಿನ ಮರೋಳಿಯಲ್ಲಿ ಇರುವ ಶ್ರೀ ಸೂರ್ಯನಾರಾಯಣ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನವಾಗಿದೆ. ಈ ದೇಗುಲ ಸುಮಾರು 1,200 ವರ್ಷಗಳ ಹಿಂದೆ ತಪಸ್ವಿಗಳಿಂದ ಸ್ಥಾಪನೆಗೊಂಡಿತ್ತು ಎಂದು ಹೇಳಲಾಗುತ್ತದೆ. ಇದೀಗ ಬಜಾಲುಬೀಡು, ಜೆಪ್ಪುಗುಡ್ಡೆ ಗುತ್ತು ಬಡಿಲಗುತ್ತು ಸೇರಿದಂತೆ ಏಳು ರಕ್ಷಕ ಮನೆತನದವರು ಈ ದೇವಸ್ಥಾನವನ್ನು ಮುನ್ನಡೆಸುತ್ತಾ ಬರುತ್ತಿದ್ದಾರೆ.
ನಗರದ ಪಂಪ್‌ವೆಲ್‌ನಿಂದ ಎರಡೂವರೆ ಕಿ.ಮೀ ದೂರದಲ್ಲಿರುವ ಮರೋಳಿಯಲ್ಲಿ ಈ ದೇವಸ್ಥಾನ ಇದೆ. ಮಹಾ ತಪಸ್ವಿ ಋುಷಿಯೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ನೆಲೆ ಆಯಿತು ಎಂಬುದು ಇಲ್ಲಿಯ ಪ್ರತೀತಿ. ಇಲ್ಲಿ ಶ್ರೀ ಸೂರ್ಯ ದೇವರನ್ನು ನಾಥ ಪಂಥದವರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತಿದೆ. ಸುಮಾರು 450-500 ವರ್ಷಗಳ ಹಿಂದೆ ಬಜಾಲು ಜೈನ ಪಾಳೆಗಾರ್ತಿಯೊಬ್ಬರು ಈ ದೇವಸ್ಥಾನವನ್ನು ಮರು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ.
ರಥಸಪ್ತಮಿಯಂದು ರಥೋತ್ಸವ:ಈ ಕ್ಷೇತ್ರದಲ್ಲಿ ಶ್ರೀ ಸೂರ್ಯನಾರಾಯಣ ದೇವರಿಗೆ ಮೂರೂ ಹೊತ್ತು ಪೂಜೆ ನಡೆಯುತ್ತದೆ. ಪ್ರತಿ ವರ್ಷ ರಥಸಪ್ತಮಿಯಂದು ಸೂರ್ಯ ನಡು ನೆತ್ತಿಗೆ ಬಂದಾಗ ದೇವರಿಗೆ ಪೂಜೆ ನಡೆದು, ಬಳಿಕ ಬಲಿ ಉತ್ಸವ, ನಂತರ ರಥಾರೂಢರಾಗಿ ರಥೋತ್ಸವ ಜರುಗುತ್ತದೆ. ಸಂಜೆ ಮತ್ತೆ ರಥೋತ್ಸವ, ಅದೇ ದಿನ ರಾತ್ರಿ ದೊಡ್ಡ ರಂಗಪೂಜಾದಿ ಸೇವೆಗಳು ನಡೆಯುತ್ತವೆ. ಮರುದಿನ ಪ್ರಾತಃಕಾಲ ಅರುಣೋದಯಕ್ಕೆ ಪುನಃ ರಥಾರೋಹಣವಾಗಿ ರಥ ಎಳೆಯುವ ಪದ್ಧತಿ ಅನಾದಿಕಾಲದಿಂದಲು ನಡೆದುಕೊಂಡು ಬಂದಿದೆ.
2016ರಲ್ಲಿ ಸೂರ್ಯ ನಾರಾಯಣ ದೇವಸ್ಥಾನದ ಜೀರ್ಣೊದ್ಧಾರ ಕಾಮಗಾರಿ ನಡೆಸಲಾಗಿತ್ತು. ಈ ಸಂದರ್ಭ ದೇವಸ್ಥಾನವನ್ನು ಅದ್ಭುತವಾಗಿ ಮರು ನಿರ್ಮಾಣ ಮಾಡಲಾಗಿದೆ. ನೈಸರ್ಗಿಕವಾಗಿ, ಪ್ರಕೃತಿದತ್ತವಾಗಿ ದೊರಕುವ ವಸ್ತುಗಳಿಂದಷ್ಟೇ ದೇವಸ್ಥಾನದ ಮರು ನಿರ್ಮಾಣ ಮಾಡಲಾಗಿದೆ.
ತಮಿಳುನಾಡಿನ ಶಿಲೆಗಾರರಿಂದ ವಿನ್ಯಾಸ:ಪಾದುಕಾ, ಜಗತಿ, ಕುಮುದ, ಗಳಪಡಿ, ವೇದಿಕೆ, ಪಂಚಾಂಗಗಳನ್ನು ತಮಿಳುನಾಡಿನ ಶಿಲೆಗಾರರಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ದೇವಸ್ಥಾನದಲ್ಲಿ ಒಟ್ಟು 90 ಕಂಬಗಳಿದ್ದು ಅದ್ಬುತವಾಗಿ ಶಿಲ್ಪ ಕೆತ್ತನೆಗಳನ್ನು ಮಾಡಲಾಗಿದೆ. ಇದಕ್ಕೆ ತೈಲಾಂಶವಿರುವ ಬೋಗಿಮರವನ್ನು ಉಪಯೋಗಿಸಿ ಕಾಷ್ಠಕಲೆಯ ಕಾರ್ಯವನ್ನು ಮಾಡಲಾಗಿದೆ. ದೇಗುಲದ ಬಾಗಿಲಿನ ಪೂರ್ವ ದಿಕ್ಕಿನ ಎರಡೂ ಪೌಳಿಯಲ್ಲಿ ಹನ್ನೆರಡು ಕಂಬಗಳಿದ್ದು ಅವುಗಳಲ್ಲಿ ನವಗ್ರಹ ದೇವತೆಗಳು, ಅಧಿದೇವತೆ, ಪ್ರತ್ಯಧಿದೇವತೆ, ಆ ಗ್ರಹ ದೇವತೆಗಳಿಗೆ ಸಂಬಂಧಿಸಿದ ರಾಶಿಗಳಿ ತಕ್ಕಂತೆ ಚೈತ್ರಾದಿ ಹನ್ನೆರಡು ಮಾಸಗಳ ಕಾಲ ಕೆತ್ತಲ್ಪಟ್ಟಿವೆ.
ಗರ್ಭಗುಡಿಯ ಸುತ್ತಲೂ ಹದಿನಾರು ಕಂಬಗಳಲ್ಲಿ ಅರುವತ್ತು ಸಂವತ್ಸರಗಳನ್ನು ಗುರುತಿಸಲಾಗಿದೆ. ಗಣಪತಿ ಗುಡಿಯ ಎದುರಿನ ಕಂಬದಲ್ಲಿ ಗಣಪತಿಯ ನಾಲ್ಕು ರೂಪಗಳನ್ನು ಕೆತ್ತಲಾಗಿದೆ. ತೀರ್ಥ ಮಂಟಪದ ನಾಲ್ಕು ಕಂಬದಲ್ಲಿ ನಾಲ್ಕು ವೇದಗಳು, ಧರ್ಮಾದಿ ಚತುಷ್ಟಯಗಳು, ನಾಲ್ಕು ವೇದಾಂಗಗಳು, ನಾಲ್ಕು ಶಾಸ್ತ್ರಗಳನ್ನು ಕೆತ್ತಲಾಗಿದೆ.
ಅಗ್ರಸಭಾದ ಶಿಲಾಕಂಬಗಳಲ್ಲಿ 12 ರಾಶಿಗಳು, ಆಯಾ ರಾಶಿಗಳ ಅಧಿಪತಿಗಳು, ಪ್ರತ್ಯಧಿದೇವತೆ ಸಹಿತ ಗ್ರಹದೇವತೆಗಳನ್ನು ಕೆತ್ತಲಾಗಿದೆ. ಕನಿಷ್ಟ 600 ವರ್ಷ ಬಾಳ್ವಿಕೆಯ ದೃಷ್ಟಿಯನ್ನಿಟ್ಟುಕೊಂಡು ಈ ಎಲ್ಲಾ ಅದ್ಬುತ ಕೆಲಸವನ್ನು ಮಾಡಲಾಗಿದೆ. ಈ ಸುಂದರ ಕೆತ್ತನೆ ಭಕ್ತರ ಗಮನಸೆಳೆಯುತ್ತಿದೆ.
ಇದನ್ನೂ ಓದಿ:ಗುರುಮಠಕಲ್ ಮೋತಕಪಲ್ಲಿಯ ಬಲಭೀಮಸೇನ ದೇಗುಲದಲ್ಲಿ ರಥಸಪ್ತಮಿ ಸಂಭ್ರಮ