ಮಂಗಳೂರು: ಪರಮಪಾವನ ತಾಣ, ದೇಯಿ ಬೈದ್ಯೆತಿ ಕೋಟಿ ಚೆನ್ನಯ್ಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಜುಲೈ 31 ರವರೆಗೆ ಭಕ್ತರ ಪ್ರವೇಶ, ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕೋಟಿ ಚೆನ್ನಯ್ಯರ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಜು. 31ರವರೆಗೆ ದರ್ಶನ ನಿರ್ಬಂಧ
ಜೂನ್ 8 ರಿಂದ ರಾಜ್ಯದಲ್ಲಿ ದೇಗುಲಗಳು ತೆರೆದಿದ್ದರೂ, ಮಂಗಳೂರಿನ ಗೆಜ್ಜೆಗಿರಿಯಲ್ಲಿ ಜೂನ್ 14ರಿಂದ ದೇವಸ್ಥಾನ ತೆರೆಯಲಾಗಿತ್ತು. ಇದಾದ ಬಳಿಕ ಭಕ್ತರ ಸುರಕ್ಷತೆಗಾಗಿ ಕ್ಷೇತ್ರದಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾ ಬರಲಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಎಂದಿನಂತೆ ನಿತ್ಯ ಪೂಜೆಯು ಯಥಾಪ್ರಕಾರ ನಡೆಯಲಿದೆ. ಅಗತ್ಯ ಸಂಖ್ಯೆಯ ಪೂಜಾಕರ್ಮಿಗಳು ಮಾತ್ರ ಇದರಲ್ಲಿ ಭಾಗವಹಿಸಲಿದ್ದಾರೆ. ಉಳಿದಂತೆ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಲಾಕ್‌ಡೌನ್ ಆರಂಭಗೊಂಡ ಬಳಿಕ ಕ್ಷೇತ್ರವನ್ನು ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಿ ನಿತ್ಯ ಪೂಜೆ ಮಾತ್ರ ನಡೆಸಲಾಗುತ್ತಿತ್ತು.
ಸ್ಯಾನಿಟೈಸಿಂಗ್, ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಪಾಲನೆ ಇತ್ಯಾದಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಕಾರಣ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಡಿನ ಸುರಕ್ಷತೆ, ಸಾರ್ವಜನಿಕರ ಆರೋಗ್ಯ ನಮ್ಮೆಲ್ಲರ ಹೊಣೆ. ಮಹಾಮಾತೆ ದೇಯಿ ಬೈದ್ಯೆತಿ ಮತ್ತು ಅವಳಿ ವೀರರಾದ ಕೋಟಿ ಚೆನ್ನಯ್ಯರ ಅನುಗ್ರಹ ನಮ್ಮೆಲ್ಲರ ಮೇಲಿರಲಿ. ಆದಷ್ಟು ಶೀಘ್ರದಲ್ಲಿ ಈ ಮಹಾಮಾರಿಯಿಂದ ಇಡೀ ಮಾನವ ಜನಾಂಗವೇ ಮುಕ್ತವಾಗಿ ಮತ್ತೆ ಆರೋಗ್ಯಪೂರ್ಣ ಸಮಾಜ ಎದ್ದು ಬರಲಿ ಎಂದು ಶ್ರೀಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಆಶಿಸಿದ್ದಾರೆ.