ಪುತ್ತೂರು: ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಸರಕಾರ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆ ಪುತ್ತೂರು ನಗರ ವ್ಯಾಪ್ತಿಯ ವಿವಿಧ ಕಡೆ ಗಣೇಶೋತ್ಸವ ಆಚರಣೆ ಒಂದು ದಿನ ಮಾತ್ರ ನಡೆಯುತ್ತಿದೆ.
ಪ್ರತಿವರ್ಷ ಕಿಲ್ಲೆ ಮೈದಾನದಲ್ಲಿ 7 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶೋತ್ಸವ ಈ ಬಾರಿ ನೆಲ್ಲಿಕಟ್ಟೆ ಖಾಸಗಿ ಬಸ್‌ನಿಲ್ದಾಣದ ಬಳಿಯ ಕಟ್ಟಡದಲ್ಲಿ ನಡೆಯಿತು. ಬೆಳಿಗ್ಗೆ ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಪೂಜೆ, ರಂಗ ಪೂಜೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ 54ನೇ ವರ್ಷದ ಗಣೇಶೋತ್ಸವು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಕೋವಿಡ್ ನಿಯಮಾವಳಿಯಂತೆ ವಿಗ್ರಹವನ್ನು 2 ಅಡಿ ಎತ್ತರಕ್ಕೆ ಸೀಮಿತಗೊಳಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ರಂಗಪೂಜೆ ನಡೆಯಿತು. ದರ್ಬೆ ಕಾವೇರಿಕಟ್ಟೆಯಲ್ಲಿ ನಡೆಯುವ ಗಣೇಶೋತ್ಸವ ಈ ವರ್ಷ ಪಕ್ಕದಲ್ಲಿರುವ ಕಾರ್‌ಟೆಕ್ ಮಾರುತಿ ವರ್ಕ್‌ಶಾಪ್‌ನ ಒಳ ಆವರಣದಲ್ಲಿ ನಡೆಯಿತು. ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯಿತು.
ದರ್ಬೆ ಸಂತ ಫಿಲೋಮಿನಾ ಕಾಲೇಜು ಗಣೇಶೋತ್ಸವ ಸಮಿತಿ ವತಿಯಿಂದ ಪಕ್ಕದ ಮನೆಯೊಂದರ ವಠಾರದಲ್ಲಿ ಆಚರಣೆ ಮಾಡಲಾಯಿತು. ಜನರು ಸರಕಾರದ ಕೋವಿಡ್ ನಿಯಮವನ್ನು ಪಾಲಿಸಿ ಅಂತರ ಕಾಪಾಡಿಕೊಂಡು ಗಣಪನ ದರ್ಶನ ಪಡೆದು ಪುನೀತರಾದರು. ಇದೆ ವೇಳೆ ಅಹಿತಕರ ಘಟನೆ ನಡೆಯದಂತೆ ವಿವಿಧ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.