ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ಭಕ್ತೆಯೊಬ್ಬರು ಶ್ರೀ ಕೃಷ್ಣನಿಗೆ 88 ಬಗೆಯ ಖಾದ್ಯ ಬಡಿಸಿದ್ದು, ಇದರ ಪೊಟೋವನ್ನು ಮಂಗಳೂರಿನ ವೈದ್ಯರೊಬ್ಬರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಆಗಿರುವ ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯಗಳ ಫೋಟೋವೊಂದನ್ನು ಎಕ್ಸ್ನಲ್ಲಿ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, ಅಲಂಕಾರಗೊಂಡ ದೇವರ ಮಂಟಪ, ಕೃಷ್ಣನ ಮುಂದೆ ಅಚ್ಚುಕಟ್ಟಾಗಿ ಇರಿಸಿದ 88 ಬಗೆಯ ತಿನಿಸುಗಳು, ಮಧ್ಯ ಭಕ್ತೆ ಕುಳಿತಿರುವ ಫೊಟೋಗಳನ್ನು ಹಂಚಿಕೊಂಡಿರುವ ಜೊತೆಗೆ "ಅವರ ಮತ್ತು ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರು ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು (ರೋಗಿ). ಅವರು ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು ನಿನ್ನೆ ರಾತ್ರಿ (ಸೆ.6, ಬುಧವಾರ) 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಡಾ. ಪದ್ಮನಾಭ ಕಾಮತ್, "ಇವರ ಶ್ರದ್ಧಾ ಭಕ್ತಿಗೆ ಸಾಟಿಯಿಲ್ಲ. ಕೆಲವು ವರುಷಗಳ ಹಿಂದೆ ಹೃದಯದ ತೊಂದರೆಯಿದ್ದರೂ ಅಷ್ಟಮಿಯಂದು ನೈವೇದ್ಯದ ಬಗ್ಗೆಯೇ ಆಲೋಚಿಸುತ್ತಿದ್ದರು. ದೇವರ ಮೇಲಿನ ಅಪಾರ ಭಕ್ತಿ ಹಾಗೂ ನಂಬಿಕೆಯಿಂದ ಈಗ ಆರೋಗ್ಯವಂತರಾಗಿದ್ದಾರೆ'' ಎಂದರು. ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ಬಗೆಯ ಖಾದ್ಯ ತಯಾರಿ ಮಾಡಿದ್ದರು.
ಮಂಗಳೂರಿನಲ್ಲಿ ಮೊಸರು ಕುಡಿಕೆ ಉತ್ಸವ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೊಸರು ಕುಡಿಕೆ ಸಂಭ್ರಮದಿಂದ ಆಚರಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯಲ್ಲಿ ವಿಟ್ಲ ಪಿಂಡಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಸರು ಕುಡಿಕೆ ಉತ್ಸವವನ್ನು ಆಚರಿಸಲಾಗುತ್ತದೆ.