ಸುಬ್ರಹ್ಮಣ್ಯ: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಶಿವರಾತ್ರಿ ಆಚರಣೆ ವಿವಾದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಕುಕ್ಕೆಯಲ್ಲಿಂದು ಮುಜುರಾಯಿ ಇಲಾಖೆ ಮತ್ತು ಧಾರ್ಮಿಕ ಪರಿಷತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವರಾತ್ರಿ ಆಚರಣೆ ನಡೆಸಲು ನಿರ್ಧಾರ ಮಾಡಲಾಗಿದೆ. ಶೈವ ಪದ್ದತಿಯಂತೆ ಕುಕ್ಕೆಯಲ್ಲಿ ಶಿವರಾತ್ರಿ ಆಚರಿಸುವಂತೆ ಹಿತರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಮಾ.11 ರಂದು ವೈಭವದ ಶಿವರಾತ್ರಿ ಆಚರಣೆಗೆ ನಿರ್ಧಾರ ಮಾಡಲಾಗಿದ್ದು, ಸಭೆಯ ಒಮ್ಮತದ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಲು ಸಮ್ಮತಿ ನೀಡಲಾಗಿದೆ.
ಮಹೇಶ್ ಭಟ್ ಕರಿಕಳ ಶಿವರಾತ್ರಿ ಆಚರಣೆಯ ಕುರಿತು ಮಾತನಾಡಿದರು ರುದ್ರಹೋಮ, ಕಲಶಾರಾಧನೆ, ಮಂಡಲಾರಾಧನೆ, ಬಿಲ್ವಾರ್ಚನೆ ಮೂಲಕ ಶಿವರಾತ್ರಿ ಆಚರಣೆಯು ಮಧ್ಯರಾತ್ರಿ 12 ಗಂಟೆಯವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದೆ. ಶಿವರಾತ್ರಿ ಜಾಗರಣೆ, ರುದ್ರಪಾರಾಯಣ ಸಂಪ್ರದಾಯವನ್ನು ಬದಲಿಸಬೇಡಿ ಎಂದು ಉಡುಪಿಯ ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಈ ವಿರೋಧದ ಹಿನ್ನೆಲೆ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸೂಚನೆಯಂತೆ ಈ ಸಭೆ ನಡೆಸಲಾಗಿದ್ದು, ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಲಭ್ಯವಾಗಬೇಕಿದೆ.
ಓದಿ:ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್: ಮೈಲಾರಲಿಂಗೇಶ್ವರ ಗೊರವಪ್ಪನ ಕಾರಣಿಕ!
ಸಭೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷ ಕಶೇಕೋಡಿ ಸೂರ್ಯನಾರಾಯಣ ಭಟ್, ಆಗಮ ಶಾಸ್ತ್ರ ಪಂಡಿತರು, ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು ಭಾಗಿಯಾಗಿದ್ದರು.