ಕರ್ನಾಟಕ

karnataka

ETV Bharat / state

ಕೊರೊನಾ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ: ಡಿಸಿಎಂ ಅಶ್ವತ್ಥ್ ನಾರಾಯಣ

ಬೆಂಗಳೂರಿನ ವಿಕಾಸಸೌಧದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜನಪ್ರತಿನಿಧಿಗಳೊಂದಿಗೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಅವರು ವಿಡಿಯೋ ಸಂವಾದ ನಡೆಸಿದರು.

By

Published : Jul 28, 2020, 9:57 PM IST

DCM Dr. Ashwathth Narayana Video Conversation
ವಿಡಿಯೋ ಸಂವಾದ

ಮಂಗಳೂರು: ಕೊರೊನಾ ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಹಾಗೂ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ‌. ಆದ್ದರಿಂದ ಈ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಪೊಲೀಸ್ ಇಲಾಖೆಗೆ ಆದೇಶಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜನಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಡಿಸಿಎಂ, ಇಂತಹ ಅಪಪ್ರಚಾರಗಳಿಂದ ಸಾರ್ವಜನಿಕರಲ್ಲಿ ಭೀತಿ ಮೂಡುತ್ತಿದೆ. ಅಲ್ಲದೆ ಸೋಂಕಿತರಿಗೆ ಅವಮಾನ ಮಾಡುವುದು, ಕೊರೊನಾ ವಾರಿಯರ್ಸ್ ವಿರುದ್ಧ ಗೊಂದಲ ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ವಿಡಿಯೋ ಸಂವಾದ

ಆಕ್ಸಿಜನ್ ಸಿಲಿಂಡರ್, ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್, ಆ್ಯಂಬುಲೆನ್ಸ್, ವೆಂಟಿಲೇಟರ್ ಸಹಿತ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ ನೀಡುತ್ತಿದೆ. ಕೊರೊನಾ ಸೋಂಕಿತರಿಗೆ ಆತಂಕವಾಗದಂತೆ ಸಮಸ್ಯೆಗಳನ್ನು ಪರಿಹರಿಸಿ ಬಡವರಿಗೆ ಉಚಿತ ಚಿಕಿತ್ಸೆ ನೀಡಬೇಕು. ಅಲ್ಲದೆ ಗಂಟಲು ದ್ರವದ ಮಾದರಿ ತಪಾಸಣೆ ನಡೆಸುವ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದ್ದು, ಪ್ರತಿದಿನ 1,000 ಮಾದರಿಯ ತಪಾಸಣೆ ನಡೆಯಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಸ್ಪಂದಿಸಿರುವುದಕ್ಕೆ ಡಿಸಿಎಂ ಸಹಿತ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ವೀಡಿಯೊ ಸಂವಾದದಲ್ಲಿ ದ.ಕ.ಜಿಲ್ಲಾಡಳಿತಕ್ಕೆ ಕೋವಿಡ್-19ರ ನಿಯಂತ್ರಿಸಲು ಸಚಿವರು ಮಾರ್ಗದರ್ಶನ ನೀಡಿದರು.

ಸಂವಾದದಲ್ಲಿ ಜಿಲ್ಲೆಯ‌ ಬಗ್ಗೆ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾಹಿತಿ ನೀಡಿ, ದ.ಕ.ಜಿಲ್ಲೆಯಲ್ಲಿ 204 ಆಕ್ಸಿಜನ್ ಸಿಲಿಂಡರ್‌ಗಳು, 13,500 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್, 57 ಆ್ಯಂಬುಲೆನ್ಸ್, 143 ವೆಂಟಿಲೇಟರ್‌ಗಳು ಲಭ್ಯ ಇವೆ. ಹೊಸದಾಗಿ ಬಂದಿರುವ ವೆಂಟಿಲೇಟರ್‌ಗಳ ಜೋಡಣೆಯು ಇನ್ನೆರಡು ದಿನಗಳಲ್ಲಿ ಪೂರ್ಣಗಳೊಳ್ಳಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕೊರತೆ ಇಲ್ಲ. ವೆನ್ಲಾಕ್ ಕೋವಿಡ್ ಆಸ್ಪತ್ರೆ, ಕೆಎಂಸಿ ಅತ್ತಾವರ, ಕೆ.ಎಸ್. ಹೆಗಡೆ, ಯೆನೆಪೊಯ ಆಸ್ಪತ್ರೆಗಳಲ್ಲಿ ಲ್ಯಾಬ್ ವ್ಯವಸ್ಥೆ ಇದೆ. ಪ್ರತಿದಿನ ಸರಾಸರಿ 500 ಪರೀಕ್ಷೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details