ಮಂಗಳೂರು: ಪುತ್ತೂರಿನಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಗೀಡಾದ ಹುಲಿವೇಷ ಕುಣಿತ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣದ ಆರೋಪಿಗಳು ಯಾವುದೇ ರೀತಿಯ ಮಾದಕ ಪದಾರ್ಥ ಸೇವನೆ ಮಾಡಿರುವ ಕುರಿತು ಮಾಹಿತಿ ಸಿಕ್ಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದರು. ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದುವರೆಗೂ ಆರೋಪಿಗಳು ಯಾವುದೇ ರೀತಿಯ ಮಾದಕ ದ್ರವ್ಯ ಸೇವಿಸಿದ್ದರ ಕುರಿತು ಮಾಹಿತಿ ದೊರೆತಿಲ್ಲ. ತನಿಖೆ ನಡೆಯುತ್ತಿದೆ ಎಂದರು.
ಅಕ್ಷಯ್ ಹತ್ಯೆಗೆ ಅಪಘಾತ ಒಂದು ನೆಪವೇ ಅಥವಾ ಬೇರೆ ಯಾವುದಾದರೂ ವಿಚಾರ ಇದೆಯೇ ಎಂಬ ಕುರಿತು ಸಹ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಕ್ಷಯ್ ಮತ್ತು ಆರೋಪಿಗಳ ನಡುವಿನ ನಂಟು, ವೈಷಮ್ಯದ ಕುರಿತು ಎದ್ದಿರುವ ಪ್ರಶ್ನೆಗಳ ಬಗ್ಗೆ ಗಮನಹರಿಸಿದ್ದೇವೆ. ಅದನ್ನೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಆರೋಪಿಗಳಾದ ಬನ್ನೂರು ಕೃಷ್ಣನಗರ ನಿವಾಸಿ ಹಾಗೂ ಖಾಸಗಿ ಬಸ್ ಚಾಲಕ ಚೇತನ್, ದಾರಂದಕುಕ್ಕು ನಿವಾಸಿ ಮನೀಶ್, ಪಡೀಲು ನಿವಾಸಿ ಕೇಶವ ಮತ್ತು ಬನ್ನೂರು ನಿವಾಸಿ ಮಂಜುನಾಥನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಬಳಿಕ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗಳಿಗೆ ನ.22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾಗ ಅಕ್ಷಯ್ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಪೊಲೀಸರು ಗುಂಪು ಚದುರಿಸಿದರು.