ಮಂಗಳೂರು (ದಕ್ಷಿಣ ಕನ್ನಡ) :ಮುಂದಿನ ವರ್ಷ ದೇಶ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದು ಕೇಂದ್ರ ರಾಸಾಯನಿಕ, ರಸ ಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬ ಹೇಳಿದ್ದಾರೆ.
ನಗರದ ಹೊರವಲಯದ ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲಾಸ್ಟಿಕ್ ಪಾರ್ಕ್ನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಖೂಬಾ, ದೇಶದಲ್ಲಿ ಈಗಾಗಲೇ 5 ಯೂರಿಯಾ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ವರ್ಷ 6ನೇ ಘಟಕ ಶುರುವಾಗುತ್ತದೆ. ಇದರೊಂದಿಗೆ ಪ್ರತಿ ವರ್ಷ 12.7 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡುವ ಮೂಲಕ ದೇಶದ ಅಗತ್ಯದ ಯೂರಿಯಾ ಉತ್ಪಾದನೆಯ ಗುರಿ ಸಾಧನೆಯೊಂದಿಗೆ ಸ್ವಾವಲಂಬನೆ ಸಾಧ್ಯವಾಗಲಿದೆ. ಮುಂದಿನ ವರ್ಷ ಬೇಡಿಕೆ ಇರುವ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ರೈತರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಮುಂದಿನ ಏಪ್ರಿಲ್ನಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಆದ್ದರಿಂದ ಜನವರಿಯೊಳಗೆ ಕಾಮಗಾರಿ ಉದ್ಘಾಟನೆಯಾಗಬೇಕು. ಪ್ರತಿ ತಿಂಗಳು ಯೋಜನೆಯ ಮಾಹಿತಿಯನ್ನು ನಾನು ಪಡೆಯುತ್ತಿರುತ್ತೇನೆ. ಭೂಸ್ವಾಧೀನಕ್ಕೆ ಆಗಿರುವ ತೊಡಕುಗಳನ್ನು ಶೀಘ್ರ ನಿವಾರಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ಲಾಸ್ಟಿಕ್ ಪಾರ್ಕ್ ಕಟ್ಟಡ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. 104 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ಘಟಕಗಳು ನಿರ್ಮಾಣವಾಗಲಿದೆ. ಸಿಪೆಟ್ ಕಾಲೇಜು ಕೂಡಾ ಈ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಡಿಸೆಂಬರ್‌ನೊಳಗೆ ಈ ಪ್ರದೇಶದಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಕಾಲೇಜು ಬಿಲ್ಡಿಂಗ್ ನಿರ್ಮಾಣವಾಗಲಿದೆ. ಆದರೆ ಸಮಾಧಾನಕಾರವಾದ ಪ್ರಗತಿಯಾಗಿಲ್ಲ. 70 ಪ್ರತಿಶತವಾದರೂ ಕಾಮಗಾರಿ ನಡೆಯಬೇಕಿತ್ತು.