ಮಂಗಳೂರು(ದಕ್ಷಿಣ ಕನ್ನಡ):ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳಗೊಂಡಿದ್ದರೂ ಗಡಿಯಲ್ಲಿ ತಪಾಸಣೆ ಮಾಡದೇ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಇಂದು ಮಂಗಳೂರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ, ಗಡಿಭಾಗದಲ್ಲಿರುವ ಮಂಗಳೂರಿನ ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ಸ್ವರ್ಗ ಮತ್ತು ಸುಳ್ಯಪದವು ಹಾಗೂ ಸುಳ್ಯದ ಜಾಲ್ಸೂರಿನಲ್ಲಿ ಚೆಕ್ ಪೋಸ್ಟ್ ತೆರೆಯಲಾಗುವುದು. ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ ಮೈಕ್ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವಂತೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮಂಗಳೂರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡರೆ ತಪಾಸಣೆ ಕೈಗೊಳ್ಳಲಾಗುವುದು. ಶಬರಿಮಲೆಗೆ ಹೋಗಿ ಬಂದ ಭಕ್ತರಲ್ಲಿ ಕೊರೊನಾ ಕಾಣಿಸಿಕೊಂಡರೆ ತಕ್ಷಣ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ಭಾರತ ಸರಕಾರದ ಮಾರ್ಗಸೂಚಿಗಳ ಅನ್ವಯ ಅನಗತ್ಯ ಗಾಬರಿಯಿಂದ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿಪ್ರದೇಶಕ್ಕೆ ನಿರ್ಬಂಧ ಹೇರುವ ಅವಶ್ಯಕತೆ ಇಲ್ಲ. ಈ ಬಗ್ಗೆ ಕೇರಳದಿಂದ ಬರುವ ಪ್ರತಿಯೊಬ್ಬರಿಗೂ ತಪಾಸಣೆ ನಡೆಸಲಾಗುವುದಿಲ್ಲ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜ್ವರ, ಶೀತ, ನೆಗಡಿ (ILI & SARI) ಪ್ರಕರಣಗಳ ತಪಾಸಣೆಯನ್ನು ನಡೆಸಲಾಗುವುದು. ಎಲ್ಲ SARI ಪ್ರಕರಣಗಳನ್ನು ಹಾಗೂ 20 ILI ಪ್ರಕರಣಗಳ ಪೈಕಿ 1 ILI ಪ್ರಕರಣವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ILI ಲಕ್ಷಣಗಳಿದ್ದಲ್ಲಿ ಹತ್ತಿರದ ಆರೋಗ್ಯ ಕೇಂದ್ರ ಸಂಪರ್ಕಿಸಿ ಅಗತ್ಯ ಪರೀಕ್ಷೆ, ಚಿಕಿತ್ಸೆ ಪಡೆಯಬೇಕು ಎಂದು ಮಾಹಿತಿ ನೀಡಿದರು.