ಮಂಗಳೂರು:ಬಸ್ನಲ್ಲಿ ಯುವತಿಯೋರ್ವಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಯುವತಿ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಪೊಲೀಸರ ಸಮ್ಮುಖದಲ್ಲೇ ಯುವತಿಯಿಂದ ಕಪಾಳಮೋಕ್ಷ.. ಓದಿ: ಬಸ್ನಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದ ಯುವತಿ!
ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲ, ಕೆದಿಮೂಲೆ ನಿವಾಸಿ ಹುಸೈನ್ (41) ಬಂಧಿತ ಆರೋಪಿ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆ:
ಜ.14 ರಂದು ಮಧ್ಯಾಹ್ನ 3.45 ಸುಮಾರಿಗೆ ಯುವತಿ ನಗರದ ಅಸೈಗೋಳಿಯಿಂದ ಪಂಪ್ ವೆಲ್ ಕಡೆಗೆ ಪ್ರಯಾಣ ಮಾಡುತ್ತಿರುವಾಗ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಬಳಿಯಲ್ಲಿ ಅಪರಿಚಿತನೋರ್ವ ಬಸ್ ಹತ್ತಿ ಆಕೆಯ ಪಕ್ಕದ ಸೀಟ್ನಲ್ಲಿ ಕುಳಿತಿದ್ದಾನೆ. ಸ್ವಲ್ಪ ಹೊತ್ತು ಫೋನ್ನಲ್ಲಿಮಾತನಾಡುವಂತೆ ನಟಿಸಿ ಯುವತಿಯನ್ನು ಸ್ಪರ್ಶಿಸಲು ಆರಂಭಿಸಿದ್ದಾನೆ. ಯುವತಿ ಇದನ್ನು ಪ್ರತಿಭಟಿಸಿದಾಗ ಬಸ್ನಿಂದ ಇಳಿದು ಹೋಗಿದ್ದಾನೆ. ಅದಾಗಿ ಮೂರು ಸ್ಟಾಪ್ ಕಳೆದ ಮೇಲೆ ಇನ್ನೊಂದು ಬಸ್ನಿಂದ ಇಳಿದ ಆತ, ಮತ್ತೆ ಯುವತಿಯಿದ್ದ ಬಸ್ಗೆ ಹತ್ತಿ ಮತ್ತೆ ಆಕೆಯ ಪಕ್ಕದಲ್ಲಿಯೇ ಕುಳಿತು ತೊಂದರೆ ನೀಡಲು ಆರಂಭಿಸಿದ್ದಾನೆ.
ಇದರಿಂದ ಬೇಸತ್ತ ಯುವತಿ ಇದು ಮಹಿಳೆಯರಿಗೆ ಮೀಸಲಿರಿಸಿದ ಸೀಟ್, ಪುರುಷರ ಸೀಟ್ನಲ್ಲಿಕುಳಿತುಕೊಳ್ಳಿ ಎಂದರೂ ಆತ ಗಣನೆಗೆ ತೆಗೆದುಕೊಳ್ಳದೆ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ. ಈ ಬಗ್ಗೆ ಬಸ್ ನಿರ್ವಾಹಕ, ಚಾಲಕ ಹಾಗೂ ಉಳಿದ ಪ್ರಯಾಣಿಕರಿಗೆ ತಿಳಿಯಿತಾದರೂ ಅವರೂ ಏನೂ ಹೇಳದೆ ಮೌನ ವಹಿಸಿದ್ದಾರೆ ಎಂದು ಹೇಳಿದರು.
ಬಳಿಕ ಯುವತಿ ನಿನ್ನ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವೆ ಎಂದರೂ ಆರೋಪಿ ಮುಖದಿಂದ ಮಾಸ್ಕ್ ತೆಗೆದು ಫೋಟೋ ತೆಗೆಯುವಂತೆ ಪೋಸ್ ನೀಡಿದ್ದಾನೆ. ಅದೇ ದಿನ ಯುವತಿ ತನ್ನಂತೆ ಬೇರೆಯವರಿಗೂ ಆಗಬಾರದೆಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಆರೋಪಿಯ ನೀಚ ಕೃತ್ಯದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದು ವೈರಲ್ ಮಾಡಿದ್ದಳು. ಅಲ್ಲದೆ ಈ ಬಗ್ಗೆ ಯುವತಿಗೆ ನೈತಿಕ ಬೆಂಬಲವಾಗಿ ನಿಂತ ಸಾಮಾಜಿಕವಾಗಿ ಕಾರ್ಯಕರ್ತೆ ಡಾ. ವಿದ್ಯಾ ಎಂಬವರೊಂದಿಗೆ ಬಂದು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು.
ಆರೋಪಿ ಬಂಧನ:
ಮಂಗಳೂರು ಉಪ ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಮತ್ತು ವಿನಯ್ ಎ. ಗಾಂವ್ಕರ್ ಅವರ ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಅವರ ನಿರ್ದೇಶನದಂತೆ, ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ, ಉಪ ನಿರೀಕ್ಷಕ, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರು ಹಾಗೂ ಸಿಬ್ಬಂದಿ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಆಯುಕ್ತರು 10 ಸಾವಿರ ರೂ. ನಗದು ಬಹುಮಾನ ನೀಡಿದರು. ಅಲ್ಲದೆ ಘಟನೆಯನ್ನು ಧೈರ್ಯದಿಂದ ಎದುರಿಸಿ, ಸಾಮಾಜಿಕ ಜಾಲತಾಣದಲ್ಲಿ ಬರೆದು ದೂರು ನೀಡಿರುವ ಯುವತಿಯನ್ನು ಪೊಲೀಸ್ ಆಯುಕ್ತರು ಅಭಿನಂದಿಸಿ, ಸನ್ಮಾನ ಮಾಡಿದರು.
ಈ ಸಂದರ್ಭ ಯುವತಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಕರಣವನ್ನು ಶೀಘ್ರದಲ್ಲಿ ಬೇಧಿಸಿ ಆರೋಪಿಯನ್ನು ಸೆರೆ ಹಿಡಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು. ಅದೇ ರೀತಿ ನನ್ನಂತೆ ದಿನಾ ಬಸ್ ನಲ್ಲಿ ಪ್ರಯಾಣ ಮಾಡುವ ಎಷ್ಟೋ ಯುವತಿಯರು, ಮಹಿಳೆಯರು ಮಾತ್ರವಲ್ಲದೆ ಯುವಕರೂ ಇಂತಹ ಕಿರುಕುಳ ಅನುಭವಿಸುತ್ತಿರುತ್ತಾರೆ.
ಈ ಬಗ್ಗೆ ಧೈರ್ಯದಿಂದ ಮಾತನಾಡಿ, ಆಗ ಮಾತ್ರ ಇಂತಹ ಘಟನೆಗಳು ಕಡಿಮೆಯಾಗಲು ಸಾಧ್ಯ. ಅದೇ ರೀತಿ ಇಂತಹ ಘಟನೆಗಳಾದಾಗ ಬಸ್ ನಿರ್ವಾಹಕ ಹಾಗೂ ಉಳಿದ ಪ್ರಯಾಣಿಕರು ಸಂತ್ರಸ್ತರಿಗೆ ನೈತಿಕ ಬೆಂಬಲ ನೀಡಲೇಬೇಕು. ಅಲ್ಲದೆ ಘಟನೆ ನಡೆದ ಮರುದಿನವೇ ನನಗೆ ಅಪಘಾತ ನಡೆದಿದ್ದು, ಈ ಘಟನೆಗೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.