ಚಿತ್ರದುರ್ಗ: ರಾಮಮಂದಿರ ಉದ್ಘಾಟನೆಗೆ ಕರೆಯದಿರುವುದೇ ಒಳ್ಳೆಯದಾಯಿತು. ಸಿದ್ದರಾಮಯ್ಯನವರ ಹೆಸರಲ್ಲಿಯೇ ರಾಮ ಇದೆ. ಅಲ್ಲಿಗೇಕೆ ಹೋಗಿ ಪೂಜಿಸಬೇಕು? ಸಿದ್ದರಾಮನಹುಂಡಿಯಲ್ಲಿಯೇ ರಾಮನ ದೇವಸ್ಥಾನವಿದ್ದು, ಅವರು ಅಲ್ಲಿಯೇ ಪೂಜಿಸುತ್ತಾರೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಲಾಗಿಲ್ಲ ಎಂಬ ವಿಚಾರ ಕುರಿತು ಸೋಮವಾರ ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿರುವುದು ಬಿಜೆಪಿಯವರ ರಾಮ. ಅಲ್ಲಿಗೆ ಬಿಜೆಪಿಯವರನ್ನು ಮತ್ತು ಅವರಿವರನ್ನು ಮಾತ್ರ ಕರೆಸಿಕೊಂಡು ಭಜನೆ ಮಾಡಲಿ. ನಮ್ಮ ರಾಮ ಎಲ್ಲ ಕಡೆಗೂ ಇದ್ದಾನೆ. ನಮ್ಮ ಎದೆಯಲ್ಲಿಯೂ ಇದ್ದಾನೆ. ನಾನು ಆಂಜನೇಯ. ನಾವೆಲ್ಲ ಶ್ರೀರಾಮನ ಭಕ್ತರು ಅಂತ ಹೇಳಿದ್ರು.
ನಮ್ಮ ಸಮುದಾಯದವರು ಆಂಜನೇಯ, ಹನುಮಂತ, ರಾಮ ಅಂತ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ. ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಪಡೆಯುವ ಹುನ್ನಾರ. ಅವರ (ಬಿಜೆಪಿ) ಆಡಳಿತದಲ್ಲಿ ಯಾರಿಗೆ ಅನುಕೂಲವಾಗಿದೆ? ಹಿಂದೂ ಯುವಕರಿಗೆ ಅನುಕೂಲ ಆಗಿದೆಯೇ? ಎಂದು ಆಂಜನೇಯ ಪ್ರಶ್ನಿಸಿದರು. ನಾವೆಲ್ಲ ಹಿಂದೂಗಳೇ. ಹಿಂದೂ ಧರ್ಮವನ್ನು ಬಿಜೆಪಿ ಕೊಂಡುಕೊಂಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.