ಕರ್ನಾಟಕ

karnataka

ಖಾಸಗಿ ಬಸ್ ಸಂಚಾರ ಆರಂಭ: ಕಲೆಕ್ಷನ್ ಇಲ್ಲದೆ ಹೈರಾಣಾದ ಬಸ್ ಮಾಲೀಕರು

ಕೊರೊನಾ ಮಹಾಮಾರಿಯ ಭಯಕ್ಕೆ‌ ಪ್ರಯಾಣಿಕರು ಖಾಸಗಿ ಬಸ್ ಹತ್ತಲು ಹಿಂದೇಟು ಹಾಕುತ್ತಿರುವುದರಿಂದ ಬಸ್​ಗಳು ಖಾಲಿಯಾಗಿ ಪ್ರಯಾಣ ಬೆಳೆಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಡೀಸೆಲ್ ಭರಿಸಲು ಸಹ ಮಾಲೀಕರು ಕೈಯಿಂದ ಹಣ ವ್ಯಯ ಮಾಡಬೇಕಾಗಿದೆ.

By

Published : Oct 2, 2020, 7:27 PM IST

Published : Oct 2, 2020, 7:27 PM IST

chitradurga-private-bus-owners-and-staffs-suffering-from-loss-due-to-corona-fear
ಖಾಸಗಿ ಬಸ್ ಮಾಲೀಕರು ಸಮಸ್ಯೆ

ಚಿತ್ರದುರ್ಗ: ಲಾಕ್​ಡೌನ್ ಹಾಗೂ ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಖಾಸಗಿ ಬಸ್​ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರು ಹೈರಾಣಾಗಿದ್ದು, ಸತತ ಏಳು ತಿಂಗಳಿಂದ ದುಡಿಮೆ ಇಲ್ಲದೆ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಸುಮಾರು 150ಕ್ಕೂ ಹೆಚ್ಚು ಖಾಸಗಿ ಬಸ್​ಗಳಿವೆ. ಅದರಲ್ಲಿ ಕೇವಲ 50ಕ್ಕೂ ಕಡಿಮೆ ಬಸ್​ಗಳು ಮಾತ್ರ ನಿಲ್ದಾಣಕ್ಕೆ ಆಗಮಿಸುತ್ತಿವೆ. ಕೊರೊನಾ ಮಹಾಮಾರಿಯ ಭಯಕ್ಕೆ‌ ಪ್ರಯಾಣಿಕರು ಖಾಸಗಿ ಬಸ್ ಹತ್ತಲು ಹಿಂದೇಟು ಹಾಕುತ್ತಿರುವುದರಿಂದ ಬಸ್​ಗಳು ಖಾಲಿಯಾಗಿ ಪ್ರಯಾಣ ಬೆಳೆಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಡೀಸೆಲ್ ಭರಿಸಲು ಸಹ ಮಾಲೀಕರು ಕೈಯಿಂದ ಹಣ ವ್ಯಯ ಮಾಡಬೇಕಾಗಿದೆ.

ದುಡಿಮೆ ಇಲ್ಲದೆ ಹೈರಾಣಾದ ಖಾಸಗಿ ಬಸ್ ಮಾಲೀಕರು

ಇನ್ನು ಕಲೆಕ್ಷನ್‌ ಇಲ್ಲದೆ ಹೈರಾಣಾಗಿರುವ ಬಸ್ ನಿರ್ವಾಹಕರು ಹಾಗೂ ಚಾಲಕರಿಗೆ ದುಡಿಮೆ‌ ಇಲ್ಲದೆ ಜೀವನ ನಡೆಸುವುದೇ ಕಷ್ಟಕರ ಆಗಿದೆಯಂತೆ. ಅಲ್ಲದೆ, 15 ದಿನಗಳಿಂದ ಜಿಲ್ಲೆಯಾದ್ಯಂತ ಖಾಸಗಿ ಬಸ್​ ಸಂಚಾರ ಆರಂಭವಾದರೂ ಸಹ ಲಾಭ ಇಲ್ಲದೆ ಕೆಲಸಗಾರರಿಗೆ ನೀಡಲು ಹಣ ಇಲ್ಲದೆ ಮಾಲೀಕರು ಕಂಗೆಟ್ಟಿದ್ದಾರೆ.

ಸರಿಯಾದ ದುಡಿಮೆ‌ ಇಲ್ಲದೆ ಅದೆಷ್ಟೋ ಚಾಲಕರು ಹಾಗೂ ನಿರ್ವಾಹಕರು ಇಎಮ್ಐ ಹಾಗೂ ಮಕ್ಕಳ ಶಾಲೆ‌ ಫೀಜ್​ಗಳನ್ನು ಕಟ್ಟಲು ಹಣವಿಲ್ಲದೆ ಸಾಲ ಮಾಡುವಂತಾಗಿದೆ. ಖಾಸಗಿ ಬಸ್​ಗಳನ್ನು ನಂಬಿಕೊಂಡು ಕೂತಿರುವ ಹಮಾಲರು, ಚಿಕ್ಕ ಪುಟ್ಟ ಅಂಗಡಿಯವರ ಬದುಕು ಕೂಡ ದುಸ್ತರ ಆಗಿದೆ.

ಒಟ್ಟಾರೆ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿ ಆಸರೆಯಾಗಿದೆ. ಆದ್ರೆ ಖಾಸಗಿ ಬಸ್ ಮಾಲೀಕರ, ಚಾಲಕ‌ ಹಾಗೂ ನಿರ್ವಾಹಕರ ಬದುಕು ಮಾತ್ರ ಮೂರಾಬಟ್ಟೆಯಾಗಿದೆ. ಆದಷ್ಟು ಬೇಗ ಸರ್ಕಾರ ಖಾಸಗಿ ಬಸ್‌‌ ಸಿಬ್ಬಂದಿಯ ನೆರವಿಗೆ ಬರಬೇಕು ಎನ್ನುವುದು ಜನರ ಮಾತು.

ABOUT THE AUTHOR

...view details