ಚಿತ್ರದುರ್ಗ: ಕೋವಿಡ್-19 ಹಿನ್ನೆಲೆ ಲಾಕ್ಡೌನ್ ಆದೇಶ ಜಾರಿಗೊಳಿಸಲಾಗಿದೆ. ಇದರಿಂದ ಅನೇಕರು ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯಕನ ಹಳ್ಳಿಯ ರೈತ ಮಹಿಳೆಯೊಬ್ಬರು ಈರುಳ್ಳಿ ಬೆಳೆದು ಬೆಂಬಲ ಬೆಲೆ ಸಿಗದ ನೋವಿನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದು ಫುಲ್ ವೈರಲ್ ಆಗಿದೆ.
ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಸಿಎಂಗೆ ರೈತ ಮಹಿಳೆ ಮನವಿ: ವಿಡಿಯೋ ವೈರಲ್
ಈರುಳ್ಳಿಗೆ ಸೂಕ್ತ ಬೆಲೆ ಸಿಗದ ನೋವಿನಲ್ಲಿ ಹಿರಿಯೂರು ತಾಲೂಕಿನ ಕಾಟನಾಯಕನ ಹಳ್ಳಿಯ ರೈತ ಮಹಿಳೆಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಬೆಂಬಲ ಬೆಲೆ ಘೋಷಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಕಾಟನಾಯಕನಹಳ್ಳಿಯ ನಿವಾಸಿ ವಸಂತ ಎಂಬುವರು ವಿಡಿಯೋ ಮಾಡಿ, ಸಿಎಂ ಯಡಿಯೂರಪ್ಪ ಅವರಿಗೆ ತಲುಪುವವರಿಗೆ ಇದನ್ನು ಶೇರ್ ಮಾಡಿ ಎಂದು ಜನರಿಗೆ ಕೇಳಿಕೊಂಡಿದ್ದಾರೆ. ಜಮೀನಿನಲ್ಲಿ ಸ್ವಲ್ಪ ಪ್ರಮಾಣದ ಈರುಳ್ಳಿ ಬೆಳೆ ಬೆಳೆದಿದ್ದೇವೆ. ಅದ್ರೆ ಅದನ್ನು ಯಶವಂತಪುರ ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ ಒಂದು ಚೀಲಕ್ಕೆ 300 ರಿಂದ 400 ರೂಪಾಯಿಗೆ ಕೇಳುತ್ತಿದ್ದಾರೆ. ಇದರಿಂದ ನಮಗೆ ನಷ್ಟ ಆಗುತ್ತಿದ್ದು, ಎಲ್ಲ ಈರುಳ್ಳಿ ಚೀಲಗಳನ್ನು ಮನೆಯಲ್ಲಿಯೇ ಇರಿಸಿದ್ದೇವೆ. ಈ ಬಗ್ಗೆ ಗಮನಹರಿಸಿ, ಬೆಂಬಲ ಬೆಲೆಯೊಂದಿಗೆ ಸರ್ಕಾರವೇ ಈರುಳ್ಳಿ ಖರೀದಿಸಿ ಎಂದು ಸಿಎಂಗೆ ವಿಡಿಯೋ ಮೂಲಕ ಮಹಿಳೆ ಮನವಿ ಮಾಡಿದ್ದಾರೆ.
ಇನ್ನು, ಬೆಲೆ ಕುಸಿತದಿಂದಾಗಿ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಲಿದೆ. ತಕ್ಷಣ ಸರ್ಕಾರ ಈ ಕುರಿತು ಪರಿಹಾರ ಒದಗಿಸಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ.