ಚಿಕ್ಕಮಗಳೂರು:ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕಾರ್ಫ್- ಕೇಸರಿ ಶಾಲು ವಿವಾದ ಮತ್ತೆ ಶುರುವಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬಂದ ಹಿನ್ನೆಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಇಂದು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ. ಇದು ಮತ್ತೆ ಸ್ಕಾರ್ಫ್ ಮತ್ತು ಕೇಸರಿ ಶಾಲಿನ ಕಿತ್ತಾಟಕ್ಕೆ ನಾಂದಿ ಹಾಡಲಿದೆಯಾ ಎಂಬ ಗೊಂದಲ ಶುರುವಾಗಿದೆ.
ಮೂರು ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಸ್ಕಾರ್ಫ್- ಕೇಸರಿ ಶಾಲಿನ ವಿವಾದ ಉಂಟಾಗಿ ದೊಡ್ಡ ಗಲಾಟೆಯೇ ನಡೆದಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಒಳಗೆ ಸ್ಕಾರ್ಫ್ ಧರಿಸಿ ಬರುವುದನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿದ್ದರು. ಪ್ರಾಂಶುಪಾಲರು ಪೋಷಕರ ಸಭೆ ನಡೆಸಿ ವಿವಾದವನ್ನು ತಿಳಿಗೊಳಿಸಿದ್ದರು. ಆದರೆ, ಈಗ ಮತ್ತೆ ವಿವಾದ ಉದ್ಭವಿಸಿದೆ.
ಕೊಪ್ಪ ತಾಲೂಕಿನ ಬಾಳಗಡಿಯಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಕಾಲೇಜು ವಿದ್ಯಾರ್ಥಿ ಮುಖಂಡ ವಿನಯ್ ಪ್ರತಿಕ್ರಿಯೆ ನೀಡಿದ್ದು, 'ಇಂದು ನಡೆದ ಘಟನೆ ಪ್ರಾಂಶುಪಾಲರ ಗಮನಕ್ಕೆ ಬಂದಿದೆ. ಪೋಷಕರ ಸಭೆ ಕರೆದು ಈ ಗೊಂದಲ ಇತ್ಯರ್ಥ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ನಾವು ಅಲ್ಲಿಯವರೆಗೂ ಕೇಸರಿ ಶಾಲು ಧರಿಸಿಯೇ ಕಾಲೇಜಿಗೆ ಬರುತ್ತೇವೆ. ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ಗೊಂದಲ ಬಗೆಹರಿಯುವವರೆಗೂ ನಾವು ಕೇಸರಿ ಶಾಲು ಧರಿಸಿ ಕಾಲೇಜು ಪ್ರವೇಶ ಮಾಡುತ್ತೇವೆ' ಎಂದರು.
ಇದನ್ನೂ ಓದಿ:ಕಣಿವೆ ನಾಡಿನಲ್ಲಿ ಶೂಟೌಟ್: ಎಲ್‌ಇಟಿಯ ಪ್ರಮುಖ ಕಮಾಂಡರ್ ಹತ್ಯೆಗೈದ ಸೇನೆ