ಚಿಕ್ಕಮಗಳೂರು:ಜಿಲ್ಲೆಯ ಶೃಂಗೇರಿಯ ವಿಧಾನಸಭಾ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ''ಇವತ್ತಿಗೂ ಕೂಡ ನಾನು ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ. ಲಂಚಕ್ಕೂ.. ಟಿಪ್ಸ್ಗೂ ಬಹಳ ವ್ಯತ್ಯಾಸವಿದೆ'' ಎಂದು ಶಾಸಕರು ಹೇಳಿದ್ದಾರೆ. ಈ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ''ಈ ಎಟಿಎಂ ಸರ್ಕಾರದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು. ಇದು ಸ್ವತಃ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರೇ ಒಪ್ಪಿಕೊಂಡಿರುವ ಸತ್ಯ'' ಎಂದು ಟೀಕಿಸಿದೆ. ಎರಡು ದಿನಗಳ ಹಿಂದೆ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಟಿ. ಡಿ ರಾಜೇಗೌಡ ಮಾತನಾಡಿದ ವಿಡಿಯೋ ಇದಾಗಿದೆ.
ಕೆರೆ ಮತ್ತು ನೆಮ್ಮಾರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಕೆಲ ವಿಚಾರದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಸದ್ಯ ಈ ವಿಡಿಯೋ ತುಣುಕೊಂದನ್ನು ಬಿಜೆಪಿ ಹಂಚಿಕೊಂಡಿದೆ. ''ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರವೇ ಇರುವ ಸರ್ಕಾರ ಎಂಬುದು ಸಾಬೀತಾಗಲು ಇನ್ನೇನೂ ಉಳಿದಿಲ್ಲ. ಲಂಚಬಾಕತನ ತೀರ್ಮಾನ ಮಾಡಲು ಸಾಂದರ್ಭಿಕ ಸಾಕ್ಷ್ಯಗಳೇ ಸಾಕು ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು'' ಎಂದು ಬಿಜೆಪಿ ಆಗ್ರಹಿಸಿದೆ.