ಚಿಕ್ಕಮಗಳೂರು: ಮದ್ಯಪಾನ ಮಾಡಿ ಶಾಸಕರಿಗೆ ಮನವಿ ಪತ್ರ ನೀಡಲು ಬಂದ ಪ್ರಾಂಶುಪಾಲರಿಗೆ ಶಾಸಕರು ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡು ಆಸ್ಪತ್ರೆಗೆ ಕಳುಹಿಸಿದ ಪ್ರಸಂಗ ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಸಂಸೆ ಗ್ರಾಮದಲ್ಲಿ ನಡೆದಿದೆ.
ಪ್ರಕರಣದ ವಿವರ:ಎನ್ಆರ್ ಪುರ ತಾಲೂಕಿನ ಸಂಸೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕ ನಾಯಕ್ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಶಾಸಕ ಟಿ.ಡಿ ರಾಜೇಗೌಡ ಅವರಿಗೆ ಮನವಿ ನೀಡಲು ಆಗಮಿಸಿದ್ದರು. ಈ ವೇಳೆ, ಅವರು ಫುಲ್ ಕುಡಿದು ಟೈಟ್ ಆಗಿರುವುದನ್ನ ಕಂಡ ಶಾಸಕ ರಸ್ತೆ ಮಧ್ಯೆಯೇ ಫುಲ್ ಗರಂ ಆಗಿದ್ದರು.
ಅಮಾನತು ಮಾಡುವಂತೆ ಸೂಚನೆ:ಸ್ಥಳದಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಪ್ರಾಂಶುಪಾಲರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಅಲ್ಲದೇ ಬ್ರೀಥಿಂಗ್ ಆಲ್ಕೋಹಾಲ್ ಆನ್ ಲೇಸರ್ ಮೂಲಕ ಪ್ರಾಂಶುಪಾಲರನ್ನು ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿದ್ದು ಪತ್ತೆಯಾಗಿದೆ. ಈ ಹಿನ್ನೆಲೆ ಶಿಕ್ಷಕರೇ ಹೀಗೆ ವರ್ತಿಸಿದರೆ ಮಕ್ಕಳ ಪಾಡೇನು? ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಫೋನ್ ಮಾಡಿ ಆಂಬ್ಯುಲೆನ್ಸ್ ಕರೆಸಿ ಪ್ರಿನ್ಸಿಪಾಲ್ ಲೋಕ ನಾಯಕ್ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಎನ್ಆರ್ ಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿವರೆಗೆ ಪ್ರಸ್ತುತ 240 ಜನ ಹೆಣ್ಣು ಮಕ್ಕಳಿದ್ದಾರೆ. ಈಗ ಮತ್ತೆ ಹೊಸದಾಗಿ 40 ಜನ ಬರುವವರು ಇದ್ದಾರೆ. ಹಾಸ್ಟೆಲ್ನಲ್ಲಿ ವಾರ್ಡನ್ ಅಂತ ಯಾರೂ ಇಲ್ಲ. ಹೀಗಾಗಿ ವಾರ್ಡನ್ ಹಾಗೂ ಪ್ರಿನ್ಸಿಪಾಲ್ ಎರಡೂ ಹುದ್ದೆಯನ್ನು ಲೋಕ ನಾಯಕ್ ಅವರೇ ನಿರ್ವಹಿಸುತ್ತಿದ್ದಾರೆ. ಸುಮಾರು 300 ಜನ ಹೆಣ್ಣು ಮಕ್ಕಳಿರುವ ವಸತಿ ಶಾಲೆಯಲ್ಲಿ ಇಂತಹ ಪ್ರಿನ್ಸಿಪಾಲ್ ಇದ್ದರೆ ಹೆಣ್ಣು ಮಕ್ಕಳ ಗತಿ ಏನು? ಎಂದು ಶಾಸಕ ರಾಜೇಗೌಡ ಪ್ರಿನ್ಸಿಪಾಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಅವರನ್ನು ಅಮಾನತು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.