ಚಿಕ್ಕಮಗಳೂರು:ಕಾಫಿನಾಡು ಮಲೆನಾಡು ಭಾಗದಲ್ಲಿ ಇಂದಿಗೂ ಜೋಳಿಗೆ ಪದ್ಧತಿ ಇನ್ನೂ ಜೀವಂತವಾಗಿದೆ. ಕರ್ನಾಟಕ ಸುವರ್ಣ ಮಹೋತ್ಸವದ ಆಚರಣೆ ಸಂಭ್ರಮದಲ್ಲಿದ್ದರೆ ಹಳ್ಳಿಗರು ಓಡಾಡೋಕು ರಸ್ತೆ ಇಲ್ಲದೇ ರೋಗಿಗಳನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಹೊತ್ಕೊಂಡು ಹೋಗುವ ದುಸ್ತರ ಬದುಕನ್ನು ಇನ್ನೂ ಸಾಗಿಸುತ್ತಿದ್ದಾರೆ.
ಜಿಕ್ಕಮಗಳೂರು ಜಿಲ್ಲೆಯ ಕಾಫಿನಾಡು ಕಾಡಂಚಿನ ಕುಗ್ರಾಮಗಳ ಜನರ ಬದುಕು ನಿಜಕ್ಕೂ ಘನಘೋರ. ಫೋನ್ ರಿಂಗಣಿಸಿದರೆ ಮನೆ ಬಾಗಿಲಿಗೆ ಆಂಬ್ಯುಲೆನ್ಸ್ ಬಂದು ನಿಲ್ಲುವ ಈ ಕಾಲದಲ್ಲಿ ಜೋಳಿಗೆಯಲ್ಲಿ ರೋಗಿಗಳನ್ನು ಹೊತ್ಕೊಂಡು ಹೋಗ್ತಿರೋ ಆ ನತದೃಷ್ಟ ಹಳ್ಳಿಯೊಂದು ಇದೆ.
ಹೌದು.. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಜೋಳಿಗೆ ಮೊರೆ ಹೋಗುವ ಮಲೆನಾಡಿಗರ ನರಳಾಟ ಮುಂದುವರಿದಿದೆ. ಬೆಟ್ಟ-ಗುಡ್ಡ, ಕಲ್ಲು-ಮುಳ್ಳನ್ನು ಲೆಕ್ಕಿಸದೇ ಹಳ್ಳ-ಗುಡ್ಡವೇರಿ ಗ್ರಾಮಸ್ಥರು ಜೋಳಿಗೆ ಹೊತ್ತುಕೊಂಡು ಸಾಗಿಸುವ ಸ್ಥಿತಿ ಮನ ಕಲಕುವ ಘಟನೆಗೆ ಸಾಕ್ಷಿಯಾಗಿದೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೀನಾರಿ ಗ್ರಾಮ. ಕಳಸ ತಾಲೂಕಿನಲ್ಲಿ ಈ ಆಧುನಿಕ ಕಾಲದಲ್ಲಿಯೂ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಜೋಳಿಗೆ ಮೂಲಕ ಆಸ್ಪತ್ರೆಗೆ ಸಾಗಿಸುವುದು ಇನ್ನೂ ಜಾರಿಯಲ್ಲಿದೆ. ಅದಕ್ಕೆ ಕಾರಣ ನಮ್ಮ ವ್ಯವಸ್ಥೆ. ಇಲ್ಲಿನ 36 ಕುಟುಂಬಗಳ ಬದುಕಿನ ಬವಣೆಯನ್ನು ಕೇಳೋರೇ ಇಲ್ಲ.. ಇಲ್ಲಿ ಎಲ್ಲವೂ ನಿತ್ಯ ನರಕಮಯ.
ಸೂಕ್ತ ರಸ್ತೆ, ಮೂಲ ಸೌಕರ್ಯಗಳಿಲ್ಲದೇ ಪರದಾಡುವ ಗ್ರಾಮದ ಜನ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ನಿಜಕ್ಕೂ ಮನ ಕಲಕುವಂತಿದೆ. ಹೇಗಾದರೂ ಮಾಡಿ ವ್ಯಕ್ತಿಯ ಜೀವ ಉಳಿಸಬೇಕು ಅನ್ನೋದು ಹಳ್ಳಿಗರ ಛಲ. ಮತ್ತೊಂದೆಡೆ ಜೋಳಿಗೆಯಲ್ಲಿ ನರಳಾಡುತ್ತಿರುವ ವ್ಯಕ್ತಿಯ ನರಳಾಟ ಯಾವ ಶತ್ರುವಿಗೂ ಬೇಡದಂತಾಗಿದೆ. ಇಲ್ಲಿನ ಜನ ಸ್ವಾಮಿ ರಸ್ತೆ ನಿರ್ಮಾಣ ಮಾಡಿಕೊಡಿ ಅಂತ ಹತ್ತಾರು ಬಾರಿ ಸರ್ಕಾರ, ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮನವಿ ಪತ್ರಗಳ ಸ್ಥಿತಿ ನೀರಲ್ಲಿ ಅಸ್ತಿ ಬಿಟ್ಟಂತಾಗಿದ್ದು, ಜನರ ಕಣ್ಣೀರಿಗೆ ಬೆಲೆ ಇಲ್ಲದಂತಾಗಿದೆ.