ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹಾನಿಯಾಗಿರುವ ಮನೆಯ ಕೊಟ್ಟಿಗೆಯ ದೃಶ್ಯ ಚಿಕ್ಕಮಗಳೂರು:ಮನೆ ಮಾಲೀಕನ ಅಂತ್ಯ ಸಂಸ್ಕಾರಕ್ಕೆ ಹೋದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಮನೆ, ಕೊಟ್ಟಿಗೆ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಾಣೂರು ಗ್ರಾಮ ನಡೆದಿದೆ. ಪರಿಣಾಮ ಕೊಟ್ಟಿಗೆಯಲ್ಲಿದ್ದ ರಾಸುಗಳು ಸಜೀವ ದಹನ ಆಗಿವೆ.
ಅಜ್ಜಂಪುರ ತಾಲೂಕಿನ ಬಾಣೂರು ಗ್ರಾಮದ 65 ವರ್ಷದ ವೃದ್ಧ ಹನುಮಂತಪ್ಪ ಎಂಬುವರು ಬುಧವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರು. ಮನೆಯವರು ಅವರ ಅಂತ್ಯಸಂಸ್ಕಾರಕ್ಕೆ ಎಂದು ಹೋಗಿದ್ದ ವೇಳೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ನಿಂದ ಅನಿಲ್ ಸೋರಿಕೆಯಾಗಿ, ಸಿಲಿಂಡರ್ ಬ್ಲಾಸ್ಟ್ ಆಗಿರುವ ದುರ್ಘಟನೆ ಸಂಭವಿಸಿದೆ.
ಸಿಲಿಂಡರ್ ಸ್ಫೋಟಗೊಂಡಿರುವ ರಭಸಕ್ಕೆ ಅಕ್ಕ ಪಕ್ಕದ ಎರಡು ಶೀಟ್ ಹಾರಿ ಹೋಗಿದ್ದು, ಮನೆ ಸುಟ್ಟಿರುವುದು ಅಷ್ಟೇ ಅಲ್ಲದೇ ಮನೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಹಸು ಹಾಗೂ ಒಂದು ಕುರಿ ಸಜೀವ ದಹನಗೊಂಡಿವೆ. ಬೆಂಕಿ ಅವಘಡದಿಂದ ಶೀಟ್ ಮನೆ ಹಾಗೂ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಗ್ರಾಮದಲ್ಲಿ ಹೆಚ್ಚಿನ ಜನರು ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಕಾರಣ ಗ್ರಾಮದಲ್ಲಿದ್ದ ಕೆಲ ಸ್ಥಳೀಯರು ಬೆಂಕಿ ನಂದಿಸಲು ಹರ ಸಾಹಸ ಪಟ್ಟಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದಡೆ ಮನೆ ಮಾಲೀಕನ ಸಾವು ಮತ್ತೊಂದಡೆ ಮನೆಯಲ್ಲಿದ್ದ ವಸ್ತುಗಳು, ಜಾನುವಾರು ಬೆಂಕಿಗೆ ಆಹುತಿ ಆಗಿರುವುದು ಮನೆಯರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಸಿಲಿಂಡರ್ ಸ್ಫೋಟಕ್ಕೆ ಮೂರು ಮಹಿಳೆಯರಿಗೆ ಗಾಯ: ರಾಯಚೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದಕಿದ್ದಂತೆಯೆ ಸ್ಫೋಟಗೊಂಡಿದ್ದು, ಸ್ಫೋಟದ ರಭಸಕ್ಕೆ ಮನೆಯ ಬಾಗಿಲ ಬಳಿ ಇದ್ದ ಮಹಿಳೆ ಹೊರಗಡೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮನೆಯ ಮಹಿಳೆ ಅಡುಗೆ ಅನಿಲ ಬಳಕೆ ಮಾಡಲು ಹೋದಾಗ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಪರಿಣಾಮ ಮನೆ ಕೆಲಸ ಮಾಡಲು ಬಂದ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದರು. ಸಿಲಿಂಡರ್ ಬ್ಲಾಸ್ಟ್ನಿಂದಾಗಿ ಮನೆಯ ಬಾಗಿಲು ಮುರಿದು ತುಣುಕುಗಳು ಹಾಗೂ ಮನೆಯೊಳಗೆ ಇದ್ದ ಮಹಿಳೆ ಹೊರಗಡೆ ರಸ್ತೆಯ ಮೇಲೆ ಬಂದು ಬಿದ್ದಿರುವ ಭಯಾನಕ ದೃಶ್ಯ ಬಡಾವಣೆಯಲ್ಲಿ ಆಡಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ:ಕೊಯಮತ್ತೂರು ಕಾರು ಸ್ಫೋಟ ಪ್ರಕರಣ : ಮತ್ತೊಬ್ಬ ಆರೋಪಿ ಬಂಧಿಸಿದ ಎನ್‌ಐಎ