ಮಳೆ: ಕಾಫಿ ಬೆಳೆಗಾರರ ಸಮಸ್ಯೆ ಚಿಕ್ಕಮಗಳೂರು: ಮಾಂಡೌಸ್ ಚಂಡಮಾರುತದಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರು ತತ್ತರಿಸಿದ್ದಾರೆ. ಕೊಯ್ಲಿಗೆ ಬಂದ ಸಂದರ್ಭದಲ್ಲಿ ಮಳೆ ಸುರಿದು ಬೆಳೆ ಗೊಬ್ಬರವಾಗುತ್ತಿದೆ. ಕಾಫಿ ಕೊಯ್ಯಲು ಜನರೂ ಸಹ ಸಿಗುತ್ತಿಲ್ಲವಂತೆ.
ಚಂಡಮಾರುತದಿಂದ ಶೀತ ಹೆಚ್ಚಾಗಿ ಗಿಡದಲ್ಲಿ ಹಣ್ಣಾಗಿರುವ ಕಾಫಿ ಒಡೆದು, ಉದುರಿ ಹೋಗ್ತಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಣ್ಮುಂದೆಯೇ ಹಾಳಾಗುತ್ತಿದೆ. ಮಾಂಡೌಸ್ ಚಂಡಮಾರುತ ಕಾಫಿ ಬೆಳೆಗಾರರ ಬದುಕಿಗೆ ಬರೆ ಎಳೆದಿದೆ.
ಕಳೆದ ಮೂರ್ನಾಲ್ಕು ದಿನದಿಂದ ಮಳೆಯ ಮಧ್ಯೆ ಶೀತ ಗಾಳಿಯೂ ಬೀಸುತ್ತಿದೆ. ನವೆಂಬರ್-ಡಿಸೆಂಬರ್ ತಿಂಗಳಲ್ಲೇ ಕಾಫಿ ಕೊಯ್ಲಿಗೆ ಬರುತ್ತದೆ. ಸಾಮಾನ್ಯ ದಿನಗಳಲ್ಲಿ ಈ ಸಂದರ್ಭದಲ್ಲಿ ತೋಟದ ತುಂಬಾ ಕಾರ್ಮಿಕರು ಕಾಫಿ ಕೊಯ್ಯುತ್ತಿದ್ದರು. ಇದೀಗ ಬೆಳೆಗಾರರು ಸರ್ಕಾರದ ನೆರವಿನ ದಾರಿ ಕಾಯ್ತಿದ್ದಾರೆ.
ಇದನ್ನೂ ಓದಿ:ಮಾಂಡೌಸ್ ಚಂಡಮಾರುತ ಎಫೆಕ್ಟ್ .. ಆತಂಕದಲ್ಲಿ ದ್ರಾಕ್ಷಿ ಬೆಳೆಗಾರರು
2022ರ ಜನವರಿಯಲ್ಲಿ ಆರಂಭವಾದ ಮಳೆ ಡಿಸೆಂಬರ್ ಬಂದ್ರೂ ನಿಂತಿಲ್ಲ. ಆಗಾಗ್ಗೆ ವಾರ, ಹದಿನೈದು ದಿನ ಬಿಡುವು ನೀಡಿದ್ದು ಬಿಟ್ಟರೇ ವರುಣದೇವ ವರ್ಷವಿಡೀ ಕಾಫಿನಾಡಲ್ಲೇ ಠಿಕಾಣಿ ಹೂಡಿದಂತಿದೆ. ಇದು ಕಾಫಿಯಷ್ಟೇ ಅಲ್ಲ ಅಡಿಕೆ, ಮೆಣಸು ಸೇರಿದಂತೆ ವಿವಿಧ ಬೆಳೆಗಳ ಮೇಲೂ ಪರಿಣಾಮ ಬೀರಿದೆ.