ಚಾಮರಾಜನಗರ:ಮೊದಲು ವಂದಿಪ ವಿನಾಯಕನಿಗೆ ವಿಶ್ವದ್ಯಾಂತ ಭಾರತೀಯರು ಭಕ್ತಿಯಿಂದ ಗೌರಿ - ಗಣೇಶ ಹಬ್ಬ ಆಚರಿಸಿ ವಂದಿಸಿದರೆ ನಗರದ ಉಪ್ಪಾರ ಸಮುದಾಯದ ಕೆಲ ಮನೆತನದವರು ಗೌರಿ- ಗಣೇಶ ಹಬ್ಬವನ್ನೇ ಮಾಡುವುದಿಲ್ಲ.
ಹಬ್ಬದಂದು ಮನೆಯಲ್ಲಿ ಅನ್ನವನ್ನೂ ಮಾಡಲ್ಲ - ಸ್ನಾನವನ್ನೂ ಮಾಡದ ಸಂಪ್ರದಾಯ ಶತಮಾನಗಳಿಂದ ಮುಂದುವರೆದಿದೆ. ವಿಘ್ನ ವಿನಾಯಕನನ್ನು ಇಡೀ ದೇಶವೇ ಬರಮಾಡಿಕೊಂಡು ಸಂಭ್ರಮ ಆಚರಿಸಿದರೇ ಇವರು ಮಾತ್ರ ಸ್ನಾನವನ್ನೂ ಮಾಡದೇ, ಮಕ್ಕಳಿಗೆ ಹೊಸ ಬಟ್ಟೆ ತೊಡಿಸದೇ ಕೊನೆಗೇ ಅನ್ನವನ್ನೂ ಮಾಡದೇ ಹಬ್ಬದ ಸಂಭ್ರಮದಿಂದ ಚಾಮರಾಜನಗರದ ಉಪ್ಪಾರ ಜನಾಂಗದ ಶೇ.90 ಕ್ಕೂ ಹೆಚ್ಚು ಮಂದಿ ದೂರ ಉಳಿಯುತ್ತಾರೆ.
ಗೌರಿ-ಗಣೇಶ ಹಬ್ಬ ಮಾಡುವುದಿರಲಿ ರುಚಿಯಾದ ಊಟವನ್ನೂ ಹಬ್ಬದ ದಿನ ಸೇವಿಸುವುದಿಲ್ಲ. ಮುದ್ದೆ, ಉಪ್ಪುಸಾರು ಕೆಲವರು ಉಪ್ಪುಸಾರಿಗೆ ಒಗ್ಗರಣೆಯನ್ನೂ ಹಾಕದೇ ಸಪ್ಪೆ ಸಾರಿನಲ್ಲೇ ಮುದ್ದೆ ಸೇವಿಸುತ್ತಾರೆ.
ಹಬ್ಬದ ದಿನದಂದು ಈ ಆಚರಣೆ ಏಕೆ ಬಂತು?
ಈ ಕುತೂಹಲಕ್ಕೆ ಉತ್ತರ ಏನಪ್ಪಾ ಅಂದ್ರೆ ಗೌರಿ ಹಬ್ಬ ಆಚರಿಸಿದರೇ ಮಕ್ಕಳಿಗೆ ಕೆಡುಕಾಗುವ ಭಯ ಈ ಸಮುದಾಯದದಲ್ಲಿ ರೂಢಿಗತವಾಗಿ ನಡೆದುಕೊಂಡು ಬಂದಿದೆ. ಹಬ್ಬ ಆಚರಣೆಗೆ ಮುಂದಾದಾಗಲೆಲ್ಲ ಮಕ್ಕಳ ಸಾವು, ಮನೆಯಲ್ಲಿ ಹಿರಿಯರು ಸಾವ ಸಂಭವಿಸಿದ್ದರಿಂದ ಹಬ್ಬದ ಆಚರಣೆಯನ್ನೇ ಈ ಸಮುದಾಯ ಕೈ ಬಿಟ್ಟಿದೆ.
ಕೆಲವರು ಇದನ್ನು ಧಿಕ್ಕರಿಸಿ ಅನ್ನ- ಸಾರು ಮಾಡಿದ ವೇಳೆ ತಿನ್ನುವ ಮೊದಲೇ ಯಾರಾದರೂ ಮೃತಪಟ್ಟಿದ್ದು, ಆಹಾರದಲ್ಲಿ ಹುಳು ಕಾಣಿಸಿಕೊಂಡ ಪ್ರಸಂಗಗಳು ನಡೆದಿದ್ದರಿಂದ ಹಬ್ಬದ ಗೋಜಿಗೆ ಹೋಗದೇ ಮುದ್ದೆ- ಉಪ್ಪುಸಾರಿಗಷ್ಟೆ ತೃಪ್ತಿ ಪಡುತ್ತಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಗಣೇಶ ಚತುರ್ಥಿ ದೊಡ್ಡ ಹಬ್ಬವಾದ್ದರಿಂದ ಮುದ್ದೆ, ನುಗ್ಗೆಸೊಪ್ಪಿನ ಉಪ್ಪುಸಾರು ಇಲ್ಲವೇ ಅಗಸೆ ಸೊಪ್ಪಿನ ಪಲ್ಯವನ್ನೇ ವಿನಾಯಕನಿಗೆ ಎಡೆಯಿಟ್ಟು ನಮಿಸುತ್ತಾರೆ. ಹಿರಿಯರ ಸಂಪ್ರದಾಯ ಇಂದೂ ಕೂಡ ಹಾಗೆ ಮುಂದುವರೆದಿದ್ದು ಹಬ್ಬದ ಮಾರನೇ ದಿನ ಸ್ನಾನ ಮಾಡಿಕೊಂಡು ಗಣಪನಿಗೆ ಪೂಜೆ ಸಲ್ಲಿಸುತ್ತಾರೆ. ಇನ್ನೂ, ಕೆಲವರು ಮೂರು ದಿನ ಅನ್ನ ಮಾಡದೇ, ದೇಗುಲಕ್ಕೆ ಹೋಗದೆ, ಒಗ್ಗರಣೆ ಹಾಕುವುದನ್ನು ನಿಲ್ಲಿಸುತ್ತಾರೆ.
ಹಬ್ಬದಂದು ಸ್ನಾನವನ್ನೂ ಮಾಡದೇ ಅನ್ನವನ್ನೂ ತಿನ್ನದೇ ಹಿರಿಯರ ಮಾತಿನಂತೆ ಇಂದಿನ ಯುವ ಪೀಳಿಗೆ ಕೂಡ ಹಬ್ಬ ಆಚರಿಸದೇ ಬಂದಿರುವುದು ಒಂದು ಅಚ್ಚರಿಯೇ ಸರಿ.