ಚಾಮರಾಜನಗರ: ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 81ರ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೊಳ್ಳೇಗಾಲದ ಬಸ್ತಿಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆ ನನ್ನ ಕೊನೆಯ ಚುನಾವಣೆ. ಶಾಸಕನಾಗಿ 39 ವರ್ಷ ಪೂರೈಸಿದ್ದೇನೆ. ಮುಂದೆ 5 ವರ್ಷ ಅಧಿಕಾರ ಮುಗಿಯುವುದರೊಳಗೆ ನನಗೆ 81 ವರ್ಷ ಕಳೆಯುತ್ತದೆ. ಹಾಗಾಗಿ, ಇದು ನನ್ನ ಕೊನೆಯ ಚುನಾವಣೆ. 81 ವರ್ಷ ಕಳೆದ ನಂತರ ನಾನು ಕೋಲು ಹಿಡಿದು ರಾಜಕಾರಣ ಮಾಡುವುದಿಲ್ಲ ಎಂದರು.
ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಸಹ ಮಾಡುತ್ತೇನೆ. ಸಿದ್ದರಾಮಯ್ಯ ಅವರು ಸಿದ್ದಪ್ಪ ಸ್ವಾಮಿ 'ಬನ್ನಿ ಪವಾಡ ಗೆದ್ದಯ್ಯ ನೀವೇ ಬನ್ನಿ ಹಾಗೂ ಆಡು ಮಲೆ ಜೇನು ಮಲೆ ಎಪ್ಪತ್ತೇಳು ಮಲೆ' ಎಂಬ ಮಲೆಮಹದೇಶ್ವರ ಪದಗಳನ್ನು ಹೇಳಿ ಈ ಹಿಂದೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗಿನ ಘಟನೆ ಹಂಚಿಕೊಂಡರು.