ಚಾಮರಾಜನಗರ :ಇಡೀ ಸಮಾಜದ ಶಾಂತಿ ಕದಡುವ, ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡ್ತಾ ಇದೆ. ಈ ಬೆಂಕಿಗೆ ಕಾಂಗ್ರೆಸ್ ಪಕ್ಷವು ಪೆಟ್ರೋಲ್ ಸುರಿತಾ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಕೋಮುದಳ್ಳುರಿ ಉಂಟಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನೂರಿನಲ್ಲಿ ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಕೋಮುದಳ್ಳುರಿ ಉಂಟಾಗುತ್ತಿದೆ. ಇವರು ಸರ್ವಜನಾಂಗದ ಶಾಂತಿ ತೋಟವನ್ನು ಹಾಳು ಮಾಡ್ತಾ ಇದ್ದಾರೆ. ಆದರೆ, ಜೆಡಿಎಸ್ ಪಕ್ಷವು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಶ್ರಮಿಸುತ್ತಿದೆ. ನಮಗೆ ಜನರ ಕಲ್ಯಾಣ ಮುಖ್ಯ ಎಂದರು.
ಸ್ವತಂತ್ರ ಬಂದು 75 ವರ್ಷ ಕಳೆದರೂ ರಾಜ್ಯದಲ್ಲಿ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಇಂದು ಜನರ ಕಲ್ಯಾಣಕ್ಕಾಗಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನನಗೆ ಸಂಪೂರ್ಣ ಬಹುಮತದ ಸರ್ಕಾರವನ್ನು ಈ ಬಾರಿ ಕೊಡಿ, ನಾನು ಸವಾಲು ಹಾಕ್ತೇನೆ ಎಲ್ಲಾ ನೀರಾವರಿ ಯೋಜನೆಗಳನ್ನು ಜಾರಿಗೊಳಿಸ್ತೀನಿ ಎಂದು ಹೇಳಿದರು.