ಚಾಮರಾಜನಗರ: ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಮೇಲೆ ಜಾನಪದ ತವರೂರು, ಗಡಿ ಜಿಲ್ಲೆಯಾದ ಚಾಮರಾಜನಗರ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಚುನಾವಣೆ ಪೂರ್ವದಲ್ಲಾದರೂ ಜಿಲ್ಲೆಯ ಜನರಿಗೆ ಸಂತೃಪ್ತಿದಾಯಕ ಬಜೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇಲ್ಲಿನವರದ್ದಾಗಿದೆ.
ಅನ್ನದಾತರ ನಿರೀಕ್ಷೆಗಳು:ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ, ಅರಿಶಿಣ ಹಾಗೂ ಟೊಮೆಟೊ, ಸಣ್ಣ ಈರುಳ್ಳಿಯನ್ನು ಬಹುಪಾಲು ಮಂದಿ ರೈತರು ಬೆಳೆಯುತ್ತಿದ್ದು ತಮಿಳುನಾಡು ಮತ್ತು ಮೈಸೂರು ಉತ್ತಮ ಮಾರುಕಟ್ಟೆಗಳಾಗಿವೆ. ಅರಿಶಿಣಪುಡಿ ತಯಾರಿಕಾ ಘಟಕ ಮತ್ತು ಟೊಮೆಟೊ, ಬಾಳೆ ಸಂಸ್ಕರಣಾ ಘಟಕ ಸ್ಥಾಪಿಸಬೇಕೆಂಬುದು ರೈತರ ಬಹುವರ್ಷಗಳ ಬೇಡಿಕೆ. ಜೊತೆಗೆ, ಹಣ್ಣು-ತರಕಾರಿ ಸಾಗಾಟಕ್ಕೆ ಗ್ರೀನ್ ವೆಹಿಕಲ್ ಮತ್ತು ಕೋಲ್ಡ್ ಸ್ಟೋರೇಜ್ ದೊರಕಿಸಿಕೊಡಬೇಕೆಂಬ ಒತ್ತಾಯವೂ ಇದೆ.
ಮೊದಲು ರೇಷ್ಮೆಗೆ ಜಿಲ್ಲೆ ಹೆಸರುವಾಸಿಯಾಗಿತ್ತು. ಈಗ, ರೇಷ್ಮೆಯನ್ನು ಬೆಳೆಯುವವರೇ ಇಲ್ಲದಂತಾಗಿದೆ. ರೇಷ್ಮೆಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ರೇಷ್ಮೆ ಬೆಳೆಗೆ ಉತ್ತೇಜನ ನೀಡಲು ಯೋಜನೆಗಳನ್ನು ತರಬೇಕಿದೆ. ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ್ದ ರೇಷ್ಮೆ ಕಾರ್ಖಾನೆ ಪುನರುಜ್ಜೀವನಗೊಳಿಸುವ ಭರವಸೆ ಇನ್ನೂ ಈಡೇರಿಲ್ಲ. ರೇಷ್ಮೆಯಿಂದ ವಿಮುಖರಾಗಿರುವ ರೈತರಿಗೆ ಉತ್ತೇಜನ ಕೊಡಬೇಕಿದೆ.
ಹೈದರಾಬಾದ್-ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿ ನಿರೀಕ್ಷೆಯಂತೆ ಅಭಿವೃದ್ಧಿಗೊಳ್ಳುತ್ತಿದೆ. ಅದೇ ರೀತಿ, ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡರೂ ವ್ಯಾವಹಾರಿಕ ಸಂಬಂಧ ಗಟ್ಟಿಯಾಗಿದ್ದರೂ ಕನ್ನಡವೇ ಉಸಿರಾಗಿರುವ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಕೊಡಬೇಕಿದೆ. ಪಕ್ಕದ ಮೈಸೂರು, ಮಂಡ್ಯದ ಗಡಿಗಳನ್ನಷ್ಟೇ ಚಾಮರಾಜನಗರ ಹೊಂದಿದ್ದು ಆ ಜಿಲ್ಲೆಗಳಲ್ಲಾಗುತ್ತಿರುವ ವೇಗದ ಬೆಳವಣಿಗೆ ಚಾಮರಾಜನಗರದಲ್ಲಿಲ್ಲ, ಈಗಲೂ ಪಕ್ಕದ ಜಿಲ್ಲೆಗಳನ್ನೇ ಉದ್ಯೋಗಕ್ಕೆ ಆಶ್ರಯಿಸಬೇಕಿದ್ದು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ಜಿಲ್ಲಾಭಿವೃದ್ಧಿಗೆ ವೇಗ ಕೊಡಬೇಕಿದೆ.