ಚಾಮರಾಜನಗರ:ಹುಲಿ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ನಡೆದಿದೆ.
ಹುಲಿಗಿಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆ ಅರಕಲವಾಡಿ ಗ್ರಾಮದ ಉದಯ್ ಎಂಬವರ ಜಮೀನಿನಲ್ಲಿ ಹುಲಿ ಸೆರೆಗಾಗಿ ಕಳೆದ 15 ದಿನಗಳಿಂದ ಇಡುತ್ತಿದ್ದ ಬೋನಿಗೆ ಗಂಡು ಚಿರತೆಯೊಂದು ಬಿದ್ದಿದೆ. ಅರಕಲವಾಡಿ ಸುತ್ತಮುತ್ತಲಿನ ಮೇಲೂರು, ಚೌಡಹಳ್ಳಿ ಎಲ್ಲೆ ಭಾಗದಲ್ಲಿ ಹುಲಿ ಓಡಾಡುತ್ತಿದ್ದು, ಕೃಷಿ ಚಟುವಟಿಕೆ ನಡೆಸಲು ತೀವ್ರ ಭಯವಾಗುತ್ತಿದೆ ಎಂದು ರೈತರು ಕಳೆದ 6 ತಿಂಗಳಿನಿಂದ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಗ್ರಾಮದ ರೈತ ವಿಜಯ್ ಕುಮಾರ್ ಮಾತನಾಡಿ, ಸುತ್ತಮುತ್ತಲೂ ಹತ್ತಾರು ಚಿರತೆಗಳಿವೆ. ಚಿರತೆಗಳನ್ನು ಸೆರೆ ಹಿಡಿಯಿರಿ ಎಂದು ನಾವು ಹೇಳುತ್ತಿಲ್ಲ. ವಾರಕ್ಕೊಮ್ಮೆ-15 ದಿನಕ್ಕೊಮ್ಮೆ ಕಾಣುತ್ತಿರುವ ಹುಲಿಯಿಂದ ಕೃಷಿ ಚಟುವಟಿಕೆಗೆ ತೊಡಕಾಗಿದೆ. ಹಗಲಿನಲ್ಲಿಯೂ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ. ಹುಲಿ ಓಡಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ತಿಳಿದಿದ್ದು ಡ್ರೋನ್ ಸರ್ವೇ ಮಾಡಿಸಿ ಹುಲಿಯನ್ನು ಕಾಡಿಗಟ್ಟಬೇಕಿದೆ ಎಂದು ಒತ್ತಾಯಿಸಿದರು.
ಇನ್ನು, ಸೆರೆಸಿಕ್ಕ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದ್ದು, ಈ ಭಾಗದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಸೆರೆಸಿಕ್ಕ ಮೂರನೇ ಚಿರತೆ ಇದಾಗಿದೆ. ಆದರೆ, ಗ್ರಾಮಸ್ಥರಲ್ಲಿ ಮಾತ್ರ ಹುಲಿ ಆತಂಕ ಇನ್ನೂ ದೂರವಾಗಿಲ್ಲ.
ಇದನ್ನೂ ಓದಿ:ಜಮೀನು ವಿವಾದ : ವೃದ್ಧನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಸಂಬಂಧಿಕರು