ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ಮೆಚ್ಚಿದ ಕೊಳ್ಳೇಗಾಲ ಕವಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ

75ನೇ ಸ್ವಾತಂತ್ಯೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಲೋರಿ ಹಾಡು (ಲಾಲಿ ಹಾಡು) ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಚಾಮರಾಜನಗರ ಜಿಲ್ಲೆಯ ಕವಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ ಬಂದಿದೆ.

ಕವಿ ಮಂಜುನಾಥ್ ದಂಪತಿ
ಕವಿ ಮಂಜುನಾಥ್ ದಂಪತಿ

By ETV Bharat Karnataka Team

Published : Jan 19, 2024, 10:24 AM IST

Updated : Jan 19, 2024, 12:03 PM IST

ಚಾಮರಾಜನಗರ:ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಜೋಗುಳ ಪದ ರಚಿಸಿದ್ದ ಕೊಳ್ಳೇಗಾಲದ ಕವಿ ಮಂಜುನಾಥ್ ಅವರಿಗೆ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಜ.24ರಂದು ಪತ್ನಿಸಮೇತ ದೆಹಲಿಗೆ ಬರುವಂತೆ ವಿಮಾನ ಟಿಕೆಟ್ ಅನ್ನು ಕೇಂದ್ರ ಸರ್ಕಾರವೇ ಬುಕ್ ಮಾಡಿದೆ.

ಮಂಜುನಾಥ್ ವೖತ್ತಿಯಲ್ಲಿ ಎಲ್​ಐಸಿ ವಿಮಾ ಪಾಲಿಸಿದಾರರು. ಪ್ರವೃತ್ತಿಯಲ್ಲಿ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಕೋವಿಡ್ ವೇಳೆ "ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ..' ಎಂಬ ಜೋಗುಳ ಪದ ರಚಿಸಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆನ್‌ಲೈನ್ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದನ್ನು ಮನಗಂಡ ಮಂಜುನಾಥ್ ತಮ್ಮ ಪುತ್ರನ ಒತ್ತಾಸೆಗೆ ಮಣಿದು ಜೋಗುಳ ಹಾಡು ರಚಿಸಿ ಕಳುಹಿಸಿದ್ದರು. 550ಕ್ಕೂ ಅಧಿಕ ಜಿಲ್ಲೆಗಳಿಂದ ಯುವ ಕವಿಗಳು, ಬರಹಗಾರರು ತಮ್ಮ ಕವನಗಳನ್ನು ಕಳುಹಿಸುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ಆದರೆ, ಮಂಜುನಾಥ್ ಅವರ ಜೋಗುಳ ಹಾಡು ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿ ಪ್ರಧಾನಿ ಮೋದಿಯವರ ಮೆಚ್ಚುಗೆಗೂ ಪಾತ್ರವಾಗಿತ್ತು.

6 ಲಕ್ಷ ರೂ. ನಗದು ಬಹುಮಾನದ ಮನ್ನಣೆಯೂ ದೊರೆತಿತ್ತು. ಇದನ್ನು ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಕನ್ನಡದ ಕವಿ ಬರೆದಿರುವ ಲೋರಿ ಹಾಡು(ಲಾಲಿ ಹಾಡು) ನನ್ನ ಗಮನ ಸೆಳೆದಿದೆ. ನಾನೂ ಸಹ ಈ ಹಾಡು ಕೇಳಿದ್ದೇನೆ, ನೀವೂ ಕೇಳಿ ಎಂದು ಮನ್‌ ಕಿ ಬಾತ್‌ನಲ್ಲಿ ಮನವಿ ಮಾಡಿದ್ದರು. ಈ ರಚನೆಗೆ ಮನ್ ಕಿ ಬಾತ್‌ನಲ್ಲಿ ಯುವ ಹಾಡುಗಾರರು ಧ್ವನಿ ನೀಡಿದ್ದು, ಹಾಡು ಮತ್ತಷ್ಟು ಜನಪ್ರಿಯತೆ ಗಳಿಸಿತ್ತು.

ಮಂಜುನಾಥ್ ಪ್ರತಿಕ್ರಿಯೆ: "75ನೇ ಸ್ವಾತಂತ್ಯೋತ್ಸವದ ಹಿನ್ನೆಲೆಯಲ್ಲಿ ನಾನು ಕೇಂದ್ರ ಸರ್ಕಾರ ಅಯೋಜಿಸಿದ್ದ ಲೋರಿ ಹಾಡು ಸ್ಪರ್ಧೆಯಲ್ಲಿ ನನ್ನ ಪುತ್ರನ ಒತ್ತಾಸೆಗೆ ಮಣಿದು ಕವನ ರಚಿಸಿದ್ದೆ. ನನ್ನ ಪುತ್ರನೇ ಅದನ್ನು ಆನ್‌ಲೈನ್ ಮೂಲಕ ಕಳುಹಿಸಿದ್ದ. ಈ ಲಾಲಿ ಹಾಡಿಗೆ ಕೇಂದ್ರದಿಂದ 6 ಲಕ್ಷ ರೂ. ನಗದು ಬಹುಮಾನ ಬಂದಿರುವುದನ್ನು ಕೇಳಿ ನನಗೆ ಅಚ್ಚರಿ ಜೊತೆ ಸಂತಸವೂ ಆಗಿತ್ತು. ಅದಾದ ಕೆಲವು ದಿನಗಳ ಬಳಿಕ ಪ್ರಧಾನಿಯವರು 'ಮನ್ ಕಿ ಬಾತ್‌'ನಲ್ಲಿ ನಮ್ಮ ಚಾಮರಾಜನಗರ ಜಿಲ್ಲೆಯ ಕವಿ ಮಂಜುನಾಥ್ ಅವರ ಲಾಲಿ ಹಾಡು ಚೆನ್ನಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಕೇಳಿ ಮತ್ತಷ್ಟು ಪುಳಕಗೊಂಡಿದ್ದೆ".

"ಈಗ ಕೇಂದ್ರ ಸರ್ಕಾರ ನನಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದೆ. ಈ ಹಿನ್ನೆಲೆಯಲ್ಲಿ ಪತ್ನಿಸಮೇತ 24ರ ಬೆಳಿಗ್ಗೆ ತೆರಳಿ, 29ರಂದು ವಾಪಸಾಗುತ್ತೇನೆ. ಕೇಂದ್ರ ಸರ್ಕಾರವೇ ನನಗೆ ಆಹ್ವಾನ ನೀಡಿ, ವಿಮಾನದ ಟಿಕೆಟ್ ಕಾಯ್ದಿರಿಸಿದೆ. ಈ ಪ್ರೀತಿಪೂರ್ವಕ ಕರೆ ನನಗೆ ಸಂತಸ ಉಂಟುಮಾಡಿದೆ" ಎಂದು ಮಂಜುನಾಥ್ ಹೇಳಿದರು.

ಇದನ್ನೂ ಓದಿ:ಗಣರಾಜ್ಯೋತ್ಸದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಕೋರಿ ಕೇಂದ್ರಕ್ಕೆ ಪತ್ರ: ಸಿಎಂ ಸಿದ್ದರಾಮಯ್ಯ

Last Updated : Jan 19, 2024, 12:03 PM IST

ABOUT THE AUTHOR

...view details