ಕರ್ನಾಟಕ

karnataka

ಇಚ್ಛಾಶಕ್ತಿ ಕೊರತೆ.. ಹುಟ್ಟಿದೂರಲ್ಲೇ ಅರ್ಧಕ್ಕೆ ನಿಂತ ವರನಟನ ಪ್ರತಿಮೆ

ದೊಡ್ಡಗಾಜನೂರು ಮುಂಭಾಗ ಸ್ಥಾಪಿಸಲು ಉದ್ದೇಶಿಸಿದ್ದ ಪುತ್ಥಳಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಅಣ್ಣಾವ್ರ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

By

Published : Apr 24, 2021, 9:58 AM IST

Published : Apr 24, 2021, 9:58 AM IST

Chamrajnagar
ಹುಟ್ಟಿದೂರಿನಲ್ಲಿಯೇ ಅರ್ಧಕ್ಕೆ ನಿಂತ ವರನಟನ ಪ್ರತಿಮೆ

ಚಾಮರಾಜನಗರ:ಜಗತ್ತಿನೆಲ್ಲೆಡೆ ಮಹಾತ್ಮಾ ಗಾಂಧಿ ಹೆಸರಿನ ರಸ್ತೆಗಳು, ಪ್ರತಿಮೆಗಳು ಇರುವಂತೆ ರಾಜ್ಯದ ವಿವಿಧ ಮೂಲೆಗಳಲ್ಲಿ ವರನಟ ಡಾ.ರಾಜ್​ಕುಮಾರ್ ಅವರ ಪುತ್ಥಳಿಗಳು, ರಾಜ್ ಹೆಸರಿನ ರಸ್ತೆ ಹಾಗೂ ಉದ್ಯಾನವನಗಳಿವೆ. ಆದರೆ ಈ ಭಾಗ್ಯ ರಾಜ್ ಹೂಟ್ಟೂರಿಗಿಲ್ಲ.

ಹುಟ್ಟಿದೂರಿನಲ್ಲಿಯೇ ಅರ್ಧಕ್ಕೆ ನಿಂತ ವರನಟನ ಪ್ರತಿಮೆ..

ಹೌದು, ಇದು ವಿಪರ್ಯಾಸವಾದರೂ ಸತ್ಯ. ದೊಡ್ಡಗಾಜನೂರು ಮುಂಭಾಗ ಸ್ಥಾಪಿಸಲು ಉದ್ದೇಶಿಸಿದ್ದ ಪುತ್ಥಳಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಅಣ್ಣಾವ್ರ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ. ಊರಿನ ಮುಂಭಾಗವೇ ಡಾ.ರಾಜ್ ಕುಮಾರ್ ವೃತ್ತ ಎಂದು ಪುತ್ಥಳಿ ಕಾಮಗಾರಿಗೆ ಚಾಲನೆ ದೊರೆತು 7-8 ವರ್ಷವಾಗಿದ್ದ‌ರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೇ ಹುಟ್ಟಿದ ಮನೆಯೂ ದುಸ್ಥಿತಿಗೆ ತಲುಪಿದೆ.

ಕುವೆಂಪು, ಆರ್.ಕೆ. ನಾರಾಯಣ್ ನಿವಾಸದ ರೀತಿ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಒತ್ತಾಯವೂ ಕನಸಾಗಿಯೇ ಉಳಿದಿದೆ. ಪ್ರತಿನಿತ್ಯ ಅಭಿಮಾನಿಗಳು ರಾ​ಜ್​ಕುಮಾರ್​ ಮನೆಗೆ ಭೇಟಿಯಿತ್ತು, ಅವರು ಓಡಾಡಿದ ಸ್ಥಳಗಳಲ್ಲಿ ನಡೆದಾಡಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುವುದು ದಿನೇದಿನೇ ಹೆಚ್ಚುತ್ತಿದೆ.

ಹುಟ್ಟಿದಮನೆ ಇದ್ದಂತೆ ಇರಬೇಕು, ಬದಲಾಗಬಾರದು ಎಂದು ದೊಡ್ಡಗಾಜನೂರಿ‌ನಲ್ಲಯೇ ಮತ್ತೊಂದು ಮನೆಯನ್ನು ರಾಜ್​ಕುಮಾರ್ ನಿರ್ಮಿಸಿ ಕೊನೆಯ ದಿನಗಳನ್ನು ಅಲ್ಲಿಯೇ ಕಳೆಯಬೇಕೆಂದು ಬಯಸಿದ್ದರು. ಆದರೆ, ವೀರಪ್ಪನ್​ನಿಂದ ಅಪಹರಣ ಹಾಗೂ ಅನಾರೋಗ್ಯದಿಂದ ಮುತ್ತುರಾಜನ ಆಸೆ ಈಡೇರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಸ್ಥಳೀಯರು.

ನಿತ್ಯವು ಅಭಿಮಾನಿಗಳು, ಪ್ರವಾಸಿಗರು ರಾಜ್​ಕುಮಾರ್ ಅವರ ಹುಟ್ಟಿದ ಮನೆ ಹಾಗೂ ಹೊಸಮನೆಯನ್ನು ಕಣ್ತುಂಬಿಕೊಂಡು ಸರ್ಕಾರ ಈಗಲಾದರೂ ಸ್ಮಾರಕವನ್ನಾಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ದೊಡ್ಡಗಾಜನೂರು ತಮಿಳುನಾಡು ವ್ಯಾಪ್ತಿಗೆ ಬರಲಿದ್ದು, ಕರ್ನಾಟಕ ಹಾಗೂ ತಮಿಳುನಾಡು ಎರಡೂ ಸರ್ಕಾರಗಳ ಸಮನ್ವಯದಿಂದ ರಾಜ್ ಹುಟ್ಟೂರನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸಬೇಕಿದೆ. ಮತ್ತು ಪುತ್ಥಳಿಯನ್ನು ನಿರ್ಮಿಸಬೇಕಿದೆ ಎಂಬುದು ಅಭಿಮಾನಿಗಳ ಆಗ್ರಹವಾಗಿದೆ.

ಪುತ್ಥಳಿ ನಿರ್ಮಾಣ ಕುರಿತು ಸ್ಥಳೀಯರಾದ ಲಕ್ಷ್ಮಣ್ ಎಂಬವರು ಪ್ರತಿಕ್ರಿಯಿಸಿ, ಅಣ್ಣಾವ್ರ ಪ್ರತಿಮೆ ನಿರ್ಮಿಸಿ ಪಾರ್ವತಮ್ಮ ರಾಜ್ ಕುಮಾರ್ ಅವರಿಂದ ಉದ್ಘಾಟಿಸಬೇಕೆಂದುಕೊಂಡಿದ್ದೆವು‌‌. ಆದರೆ, ಅಷ್ಟರಲ್ಲೇ ಅವರು ಕಾಲವಾದರು‌. ಶೀಘ್ರದಲ್ಲೇ ನಾವೇ ಅಣ್ಣಾವ್ರ ಪ್ರತಿಮೆ ನಿರ್ಮಿಸುವ ಬದಲು ಅವರಿಗಿದ್ದ ಬಿರುದುವೊಂದನ್ನು ನಿರ್ಮಿಸಿ ಯಾವಾಗಲೂ ದೀಪ ಉರಿಯುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಓದಿ:ವರನಟ ಹುಟ್ಟಿದ ಮನೆಯಲ್ಲಿ ನಿತ್ಯವೂ ಪೂಜೆ.. ಹೆಂಚಿನ ಮನೆಯಲ್ಲಿ ಮುತ್ತುರಾಜನ ಆರಾಧನೆ

ABOUT THE AUTHOR

...view details