ಚಾಮರಾಜನಗರ :ಬರೋಬ್ಬರಿ 9 ವರ್ಷಗಳ ಬಳಿಕ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರು ಸೇರಿದಂತೆ ಜಿಲ್ಲೆಯ ಆರಾಧ್ಯ ದೈವ ರಂಗನಾಥಸ್ವಾಮಿ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ದೇವಾಲಯದ ರಥ ಶಿಥಿಲಗೊಂಡಿದ್ದರಿಂದ 3 ವರ್ಷ 10 ಮೀ. ರಥ ಎಳೆದು ಆಚರಣೆ ಮಾಡಲಾಗುತ್ತಿತ್ತು. ಬಳಿಕ 6 ವರ್ಷ ದೇವಾಲಯ ಜೀರ್ಣೋದ್ಧಾರ ಮತ್ತು ಕೋವಿಡ್ ಕಾರಣದಿಂದಾಗಿ ಬ್ರಹ್ಮ ರಥೋತ್ಸವ ನಡೆದಿರಲಿಲ್ಲ.
ಇಂದು ಸಾವಿರಾರು ಮಂದಿ ಭಕ್ತರು 9 ವರ್ಷದ ಬಳಿಕ ನಡೆದ ರಥೋತ್ಸವದಲ್ಲಿ ಭಾಗಿಯಾದರು. ಮಧ್ಯಹ್ನ 12.30ರ ವೇಳೆಯ ಶುಭಲಗ್ನದಲ್ಲಿ ತೇರು ಎಳೆದು ರಥೋತ್ಸವ ನೆರವೇರಿತು. ಸೋಲಿಗರ ಹುಡುಗಿ ಕುಸುಮಾಲೆಯ ಸೌಂದರ್ಯಕ್ಕೆ ಸೋತು, ಅವಳನ್ನು ವರಿಸಿ ವಿವಾಹವಾಗುವ ಮೂಲಕ ರಂಗನಾಥ ಸ್ವಾಮಿ ಇಲ್ಲಿನ ಬುಡಕಟ್ಟು ಜನರ ಆರಾಧ್ಯ ದೈವನಾಗಿ ರೂಪುಗೊಂಡಿದ್ದು ಇಂದಿಗೂ ಗಿರಿಜನರು ದೇವರನ್ನು 'ಬಾವ' ಎಂದೇ ಕರೆಯುತ್ತಾರೆ ಎಂಬುದು ಐತಿಹ್ಯ.
9 ವರ್ಷಗಳ ಬಳಿಕ ನಡೆದ ಬಿಳಿಗಿರಿರಂಗನಾಥ ಜಾತ್ರೆ : ಸಾವಿರಾರು ಮಂದಿ ಭಾಗಿ ಸಾರಿಗೆ ಅವ್ಯವಸ್ಥೆ-ಹಿಂತಿರುಗಿದ ಭಕ್ತರು : ಬ್ರಹ್ಮ ರಥೋತ್ಸವ ಸಂಬಂಧ ಬೆಟ್ಟದ ತಪ್ಪಲಿನಿಂದ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿ, ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ತನಿಖಾ ಠಾಣೆಯಿಂದ ಸಾರ್ವಜನಿಕರು, ಭಕ್ತಾಧಿಗಳಿಗೆ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಸಾವಿರಾರು ಮಂದಿಗೆ ಬೆರಳೆಣಿಕೆ ಬಸ್ ನಿಯೋಜಿಸಿದ್ದರಿಂದ ಬಿಳಿಗಿರಿರಂಗನ ಬೆಟ್ಟದ ಚೆಕ್ ಪೋಸ್ಟ್ ಬಳಿ ನೂರಾರು ಖಾಸಗಿ ವಾಹನಗಳು ಹಾಗೂ ಸಾವಿರಾರು ಭಕ್ತರು ಜಮಾಯಿಸಿದ್ದರಿಂದ ಅವ್ಯವಸ್ಥೆ ಕೂಪವಾಯಿತು. ಬಸ್ ಸೌಲಭ್ಯವೂ ಇಲ್ಲದೇ ಖಾಸಗಿ ವಾಹನ ಮೂಲಕವೂ ರಥೋತ್ಸವಕ್ಕೂ ತೆರಳಲಾಗದೇ ನಿರಾಶೆಯಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿ ಸಾವಿರಾರು ಮಂದಿ ತಪ್ಪಲಲ್ಲೇ ಕೈಮುಗಿದು ಮನೆಗೆ ಹಿಂತಿರುಗಿದ್ದಾರೆ. ಇದೇ ಮೊದಲ ಬಾರಿಗೆ ಖಾಸಗಿ ವಾಹನಗಳನ್ನ ಬೆಟ್ಟಕ್ಕೆ ತೆರಳದಂತೆ ಚೆಕ್ ಪೋಸ್ಟ್ನಲ್ಲೇ ತಡೆಯಲಾಗಿತ್ತು. ಆದರೆ, ಸಮರ್ಪಕವಾಗಿ ನಿರ್ವಹಿಸಲಾಗದೇ ಭಕ್ತರು ತೆರಳದಂತಾಯಿತು.
ಇದನ್ನೂ ಓದಿ:ತುಮಕೂರು : ರಥದ ಸುತ್ತಲೂ ಕೆಸರಿನಲ್ಲಿಯೇ ಉರುಳುಸೇವೆ ಮಾಡಿದ ಭಕ್ತರು