ಚಾಮರಾಜನಗರ: ಏಕಾಏಕಿ ಕುಡಿದು ಬಂದ ಬಿಲ್ ಕಲೆಕ್ಟರ್ವೊಬ್ಬ ಪಿಡಿಒ ಮತ್ತು ಕಾರ್ಯದರ್ಶಿ ಮೇಲೆ ಕಲ್ಲಿನಿಂದ ಹೊಡೆದಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ಸತ್ತೆಗಾಲ ಗ್ರಾಪಂ ಪಿಡಿಒ ಅಮಿತಾ ತೇಜ್ ಗೌಡ ಹಾಗೂ ಕಾರ್ಯದರ್ಶಿ ಲೋಕೇಶ್ ಎಂಬವರ ಮೇಲೆ ಬಿಲ್ ಕಲೆಕ್ಟರ್ ನಾಗಸುಂದರ್ ಎಂಬಾತ ಕಲ್ಲಿನಿಂದ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಗ್ರಾ.ಪಂ ಪಿಡಿಒ, ಸೆಕ್ರೆಟರಿಗೆ ಕಲ್ಲಲ್ಲಿ ಹೊಡೆದ ಬಿಲ್ ಕಲೆಕ್ಟರ್ ಘಟನೆ ಬುಧವಾರ ಸಂಜೆ 5.30 ರ ಹೊತ್ತಿನಲ್ಲಿ ನಡೆದಿದ್ದು ಬಿಲ್ ಕಲೆಕ್ಟರ್ ನಾಗಸುಂದರ್ ಕಚೇರಿಗೆ ಚಕ್ಕರ್ ಹಾಕಿ ಬಳಿಕ ಹಾಜರಾತಿ ಪುಸ್ತಕ ತಿದ್ದುತ್ತಿದ್ದರಂತೆ. ಈ ಕುರಿತು, ಪಿಡಿಒ ನೋಟಿಸ್ ನೀಡಿದ್ದಕ್ಕೆ ಕುಡಿದು ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ, ಇಬ್ಬರೂ ಗಾಯಾಳುಗಳು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಜಿಪಂ ಸಿಇಒ ಲತಾ ಕುಮಾರಿ ಆಸ್ಪತ್ರೆಗೆ ದೌಡಾಯಿಸಿ ನಡೆದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.