ಬಸವಕಲ್ಯಾಣ:ಮಾರಕ ಕೊರೊನಾ ಹಬ್ಬುವುದನ್ನು ತಡೆಯಲು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿ ಆದೇಶಿಸಿದರೂ ಜನ ಸಂಚಾರಕ್ಕೆ ಕಡಿವಾಣ ಹಾಕುವುದು ಸವಾಲಿನ ಕೆಲಸವಾಗುತ್ತಿದೆ. ಈ ಮಧ್ಯೆ ಇಲ್ಲೊಂದು ಗ್ರಾಮದ ಮುಖ್ಯರಸ್ತೆಗೆ ಕಲ್ಲು, ಮುಳ್ಳು ಹಾಕಿ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿ ಹೊರಗಿನ ಜನರ ಪ್ರವೇಶ ನಿರ್ಬಂಧಿಸಲಾಗಿದೆ.
ಕೊರೊನಾ ಹತ್ತಿರ ಸುಳಿಯದಂತೆ ಈ ಗ್ರಾಮದ ನಿವಾಸಿಗಳ ವಿಶೇಷ ಕ್ರಮ ತೆಗೆದುಕೊಂಡಿದ್ದಾರೆ. ಬಸವಕಲ್ಯಾಣ ತಾಲೂಕಿನ ಆರ್. ಹಣಮಂತವಾಡಿ ಗ್ರಾಮದಲ್ಲಿ ಗ್ರಾಮಕ್ಕೆ ಪ್ರವೇಶಿಸುವ ಮುಖ್ಯರಸ್ತೆಯಲ್ಲಿ ಈ ಕ್ರಮವನ್ನು ಗ್ರಾಮಸ್ಥರೇ ತೆಗೆದುಕೊಂಡಿದ್ದಾರೆ.
ಮುಂಬೈ,ಹೈದರಾಬಾದ್‌ನ ರಾಷ್ಟ್ರೀಯ ಹೆದ್ದಾರಿ-65ರ ಪಕ್ಕದಲ್ಲಿಯೇ ಇರುವ ಪುಟ್ಟ ಗ್ರಾಮವು ಪ್ರತ್ಯೇಕ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿದೆ. ಹೆದ್ದಾರಿ ಪಕ್ಕದಲ್ಲಿರುವ ಕಾರಣಕ್ಕೆ ಈ ಊರಿಗೆ ದಿನನಿತ್ಯ ಅನೇಕರು ಆಗಮಿಸುವುದು ಸಾಮಾನ್ಯವಾಗಿದೆ. ಹೊರಗಿನವರು ಇಲ್ಲಿಗೆ ಬರುವುದನ್ನು ಗಮನಿಸಿದ ಇಲ್ಲಿನ ಗ್ರಾಮ ಪಂಚಾಯ್ತಿ ಇದೀಗ ಕೆಲಸ ಮಾಡಿದೆ.
ಅಷ್ಟೇ ಅಲ್ಲ. ಇಲ್ಲಿಯ ಗ್ರಾ.ಪಂ.ಆಡಳಿತ ಮಂಡಳಿಯು ಸ್ಥಳದಲ್ಲಿಯೇ ಕೆಲ ಸಿಬ್ಬಂದಿ ನೇಮಿಸಿ, ಹೊರಗಿನವರು ಒಳಪ್ರವೇಶಿಸದಂತೆ ಎಚ್ಚರವಹಿಸಿದೆ. ಇನ್ನು ಗ್ರಾಮದಲ್ಲಿ ಅನಗತ್ಯ ಓಡಾಡುವ ಜನರಿಗೂ ಕಡಿವಾಣ ಹಾಕಲು ಗ್ರಾ.ಪಂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗ್ರಾಪಂ ವ್ಯಾಪ್ತಿಯ ಎಲ್ಲಾ ಕಿರಾಣಿ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ 9ರ ವರೆಗೆ ಮಾತ್ರ ತೆರೆದಿಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.