ಬೀದರ್: ಆಟೋಗೆ ಲಾರಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸಾವಿಗೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮನ್ನಳ್ಳಿ ಕ್ರಾಸ್ ಬಳಿ ಇಂದು ನಡೆದಿದೆ. ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ಸುಂದರವಾಡಿ ಗ್ರಾಮದ ಪ್ರಮೀಳಾ ಜಗದಾಳೆ (32), ಇವರ ಪತಿ, ಆಟೋ ಚಾಲಕ ಸುನೀಲ ಜಗದಾಳೆ (35), ತಾಯಿ ಅನುಷಾಬಾಯಿ ಜಗದಾಳೆ (60) ಹಾಗೂ ಸಂಬಂಧಿ ತುಳಜಾಪುರ ತಾಲೂಕಿನ ಶಾಪೂರ ನಿವಾಸಿ ಪೂಜಾ ಜಾಧವ್ (17) ಮೃತರು. ಗೀತಾ ಜಗದಾಳೆ ಗಂಭೀರವಾಗಿ ಗಾಯಗೊಂಡಿದ್ದು, ಲಾತೂರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಬಳಿಯ ಐತಿಹಾಸಿಕ ಅಮೃತಕುಂಡದ ದರ್ಶನಕ್ಕೆಂದು ಇವರು ಬಂದಿದ್ದರು. ದರ್ಶನ ಮುಗಿಸಿ ಗ್ರಾಮಕ್ಕೆ ಮರಳುವಾಗ ಮನ್ನಳ್ಳಿ ಕ್ರಾಸ್ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಆಟೋದಲ್ಲಿ ಎಂಟು ಜನರಿದ್ದರು. ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಮೂವರು ಉಮರ್ಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.