ಬಸವಕಲ್ಯಾಣ: ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಬಿ.ನಾರಾಯಣರಾವ್ ಅವರ ನಿಧನದ ನಂತರ ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ಒಂದಿಲ್ಲ ಒಂದು ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಮಂಗಳವಾರ ಚುನಾವಣಾ ಆಯೋಗದಿಂದ ಉಪಚುನಾವಣೆಗೆ ದಿನಾಂಕ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿದೆ.
ಕ್ಷೇತ್ರದ ಉಪಚುನಾವಣೆಗೆ ಸ್ಫರ್ದಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಸೇರಿದಂತೆ ಇತರ ಯಾವ ಪಕ್ಷಗಳಿಂದಲೂ ಇದುವರೆಗೆ ಅಭ್ಯರ್ಥಿ ಘೊಷಣೆ ಮಾಡಲಾಗಿಲ್ಲ. ಹೀಗಾಗಿ ಆಯಾ ಪಕ್ಷಗಳಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಯಾವ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ತಿಳಿಯದಂತಾಗಿದೆ. ಏನೇ ಆದರೂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವ ಮಾ. 31ರ ಕಡೆ ಘಳಿಗೆವರೆಗೂ ಯಾವ ಪಕ್ಷಗಳು ಕೂಡ ತನ್ನ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಅಭ್ಯರ್ಥಿಯಾಗಲು ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದ್ದು, ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಆದರೆ ಜೆಡಿಎಸ್ ಪಕ್ಷದಲ್ಲಿ ಅಷ್ಟೇನು ಪೈಪೋಟಿ ಇದ್ದಂತೆ ಕಾಣುತ್ತಿಲ್ಲ. ಕಾಂಗ್ರೆಸ್‌ನಿಂದ ದಿ. ಶಾಸಕ ಬಿ.ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಬಿ.ನಾರಾಯಣರಾವ್ ಅವರು ಪತಿ ಸ್ಥಾನದಲ್ಲಿ ತಮಗೆ ಅವಕಾಶ ಕಲ್ಪಿಸಬೇಕು ಎಂದು ಪಕ್ಷದ ವರಿಷ್ಠರಲ್ಲಿ ಲಾಬಿ ನಡೆಸಿದ್ದಾರೆ. ಈ ನಡುವೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಮಾಜಿ ಮುಖ್ಯಮಂತ್ರಿ ದಿ. ಎನ್.ಧರ್ಮಸಿಂಗ್ ಅವರ ಪುತ್ರರಾಗಿರುವ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ಕೂಡ ಟಿಕೆಟ್‌ಗಾಗಿ ಟವಲ್ ಹಾಕಿದ್ದಾರೆ.
ಆಡಳಿತರೂಢ ಬಿಜೆಪಿ ಪಕ್ಷದಲ್ಲಿ ಟಿಕೆಟ್‌ಗಾಗಿ ಸುಮಾರು 18ಕ್ಕೂ ಅಧಿಕ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇಲ್ಲಿಯೂ ಕೂಡ ಇನ್ನು ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಕಳೆದ 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆಯಿಂದ ಜೆಡಿಎಸ್ ಬಿಟ್ಟು ಬಿಜೆಪಿಗೆ ಬಂದು ಸ್ಫರ್ಧೆ ಮಾಡಿ ಪರಾಭವಗೊಂಡಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು, ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದು ಪಕ್ಷದ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿಯಲ್ಲಿ ಸುಮಾರು 12ಕ್ಕೂ ಅಧಿಕ ಜನ ಟಿಕೆಟ್ ಕೇಳುತಿದ್ದರೆ, ಈ ನಡುವೆ ಕ್ಷೇತ್ರದ ಹೊರಗಿನವರು ಕೂಡ ಟಿಕೆಟ್ ಗಿಟ್ಟಿಸಿಕೊಳ್ಳುವುದಕ್ಕಾಗಿ ಲಾಬಿ ನಡೆಸುತಿದ್ದಾರೆ. ಹೀಗಾಗಿ ಇಲ್ಲಿಯೂ ಕೂಡ ಟಿಕೆಟ್ ಯಾರಿಗೆ ಎನ್ನುವ ವಿಷಯ ಕಗ್ಗಂಟಾಗಿ ಉಳಿದಿದೆ. ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಈ ಬಾರಿ ಕಲ್ಯಾಣದ ಚುನಾವಣೆ ಕಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಓದಿ:ಉಪಚುನಾವಣೆ ಸರ್ಕಾರಕ್ಕೆ ಒಂದು ರೀತಿಯ ಚಾಲೆಂಜ್: ಸಚಿವ ಆರ್.ಅಶೋಕ್
ಹೀಗಾಗಿ ಜೆಡಿಎಸ್ ಪಕ್ಷದಲ್ಲೇ ಗುರುತಿಸಿಕೊಂಡಿರುವ ಮಾಜಿ ಶಾಸಕರು ಆಗಿರುವ ಜಿಲ್ಲೆಯ ಮರಾಠ ಸಮಾಜದ ಪ್ರಬಲ ನಾಯಕ ಎಂ.ಜಿ.ಮುಳೆ ಅವರು ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಲ್ಲಿಯೂ ಕೂಡ ಇನ್ನು ಯಾವುದೇ ಸ್ಪಷ್ಟತೆ ಕಾಣಿಸುತ್ತಿಲ್ಲ. ಹೀಗಾಗಿ ಯಾರು ಯಾವ ಪಕ್ಷಗಳಿಂದ ಚುನಾವಣಾ ಕಣಕ್ಕೆ ಇಳಿಯುತ್ತಾರೆ. ಈ ಬಾರಿ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತದಾರರು ಆದ್ಯತೆ ನೀಡಲಿದ್ದಾರೆ ಎನ್ನುವ ಪ್ರಶ್ನೆಗೆ ಈಗಲೇ ಉತ್ತರ ಸಿಗದಂತೆ ಕಾಣಿಸುತ್ತಿದೆ.