ಬಸವಕಲ್ಯಾಣ: ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ತೆರಳಿದ್ದ ಕೂಲಿ ಕಾರ್ಮಿಕರಿಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗಳು ಮರಳಿ ಗ್ರಾಮಕ್ಕೆ ಮುಟ್ಟಿಸದೆ ನಡು ರಸ್ತೆಯಲ್ಲೇ ಬಿಟ್ಟು ಹೋದ ಘಟನೆ ತಾಲೂಕಿನ ಚಂಡಕಾಪುರ ಸಮೀಪದ ಮಹಾರಾಷ್ಟ್ರ ಗಡಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಮಹಾರಾಷ್ಟ್ರದ ಮುಂಬೈ, ಪುಣೆ ಮಹಾನಗರ ಸೇರಿದಂತೆ ವಿವಿಧೆಡೆ ತೆರಳಿದ್ದ ವಲಸೆ ಕಾರ್ಮಿಕರು ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ತಮ್ಮ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಅನ್ಯ ರಾಜ್ಯಗಳಿಂದ ಆಗಮಿಸಿದ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಬಿಟ್ಟು ಬರುವ ಕೆಲಸ ದೇಶದಾದ್ಯಂತ ನಡೆದಿದೆ.
ನಡು ರಸ್ತೆಯಲ್ಲೇ ಉಳಿದ ಆಂಧ್ರ, ತೆಲಂಗಾಣ ಕಾರ್ಮಿಕರು ಆದರೆ ಮಹಾರಾಷ್ಟ್ರದಿಂದ ಆಂಧ್ರ, ತೆಲಂಗಾಣಕ್ಕೆ ಪ್ರಯಾಣಿಸುತ್ತಿದ್ದ ಕಾರ್ಮಿಕರನ್ನು ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗಳು ನಡು ರಸ್ತೆಯಲ್ಲಿಯೇ ಬಿಟ್ಟು ತೆರಳುವ ಮೂಲಕ ಅಮಾನವೀಯತೆ ಮೆರೆಯುತ್ತಿವೆ. ಭಾನುವಾರ ಬೆಳಿಗ್ಗೆ ಮುಂಬೈ, ಪುಣೆ ಮಹಾನಗರಗಳಿಂದ ಆಗಮಿಸಿರುವ ಸುಮಾರು 200 ಕ್ಕೂ ಅಧಿಕ ಕಾರ್ಮಿಕರನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿಯೇ ಬಿಡಲಾಗಿದೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಅವಾಂತರದಿಂದಾಗಿ ನೂರಾರು ಕಾರ್ಮಿಕರಿಗೆ ದಿಕ್ಕು ತೋಚದಂತಾಗಿದೆ. ಮಹಿಳೆಯರು, ಚಿಕ್ಕ ಮಕ್ಕಳು, ವಯೋ ವೃದ್ಧರು ಸೇರಿದಂತೆ ಗರ್ಭಿಣಿಯರು ಇದ್ದು, ಮುಂದೆ ಸಾಗಲಾಗದೆ ನಡು ರಸ್ತೆಯಲ್ಲೇ ಕಾಲ ಕಳೆಯುತಿದ್ದು, ಅನ್ನ-ನೀರಿಗಾಗಿ ಪರಿತಪಿಸುವಂತಾಗಿದೆ.
ಹೀಗೆ ನಡು ರಸ್ತೆಯಲ್ಲಿ ಬಿಟ್ಟು ಹೋದ ಸಾರಿಗೆ ಬಸ್ಗಳ ಅಮಾನವೀಯ ನಡೆಯಿಂದ ಬೇಸತ್ತ, ಕರ್ತವ್ಯ ನಿರತ ಕರ್ನಾಟಕ ಪೊಲೀಸರು ಹಾಗೂ ಸ್ಥಳೀಯರು ಮಾಧ್ಯಮಗಳ ಮೂಲಕ ಮಹಾರಾಷ್ಟ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.