ಬಳ್ಳಾರಿ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ಚರ್ಚೆಗೆ ಬನ್ನಿ ಅಂದ್ರೆ ಕಾಂಗ್ರೆಸ್ನವರು ಓಡಿ ಹೋಗ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ.
ಮಹಾಶಿವರಾತ್ರಿ ನಿಮಿತ್ತ ಬಳ್ಳಾರಿ ಕೋಟೆ ಮಲ್ಲೇಶ್ವರ ದೇಗುಲಕ್ಕೆ ಆಗಮಿಸಿ ದರ್ಶನ ಪಡೆದ ನಂತರ ಮಾಧ್ಯಮರೊಂದಿಗೆ ಮಾತನಾಡಿದ ಅವರು, ಬಜೆಟ್ ಮೇಲೆ ಚರ್ಚಿಸಲಾಗದ ಕಾಂಗ್ರೆಸ್ಸಿಗರು ಧರಣಿ ಮಾಡಿಸುತ್ತಾರೆ. ಇದೆಲ್ಲಾ ಸದನದಲ್ಲಿ ಅವರು ನಡೆಸುತ್ತಿರೋ ಗೇಮ್ ಪ್ಲಾನ್ ಆಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನವರು ಭದ್ರಾವತಿ ಶಾಸಕ ಸಂಗಮೇಶ ಅವರ ಹಕ್ಕುಚ್ಯುತಿ ವಿಚಾರ ಹಾಗೂ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದಲ್ಲಿ ಚರ್ಚೆ ಮಾಡ್ತಿಲ್ಲ ಯಾಕೆ?
ಕೇವಲ ಗಲಾಟೆ ಮಾಡೋದು, ಸದನ ನಡೆಯದಂತೆ ಮಾಡೋದೇ ಕಾಂಗ್ರೆಸ್ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ತಮ್ಮ ಹಳೇ ಚಾಳಿಯನ್ನು ಈ ಬಾರಿಯೂ ಸದನದಲ್ಲಿ ಮುಂದುವರೆಸಿದ್ದಾರೆ. ನಾವು ಯಾವುದೇ ಚರ್ಚೆಗೂ ಸಿದ್ಧ. ಆದ್ರೆ ಕಾಂಗ್ರೆಸ್ನವರು ಯಾವುದೇ ಚರ್ಚೆಗೂ ಸಿದ್ಧವಿಲ್ಲದೆ, ಕೇವಲ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೀಸಲಾತಿ ವಿಚಾರದಲ್ಲಿ ಸುಭಾಷ್ ಅಡಿ ಅವರ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ಕುರುಬರಿಗೆ ಎಸ್ಟಿ, ಪಂಚಮಸಾಲಿಗೆ 2ಎ ವಿಚಾರದಲ್ಲಿ ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸಲಿದೆ ಎಂದರು.
ಓದಿ:ರಮೇಶ್ ಜಾರಕಿಹೊಳಿ ಸಿಡಿ ಜೊತೆ ಯಡಿಯೂರಪ್ಪ ಸಿಡಿಯ ಬಗ್ಗೆಯೂ ಚರ್ಚೆಯಾಗಲಿ: ವಾಟಾಳ್
ಕಾಂಗ್ರೆಸ್ ಮೇಲೆ ಅನುಮಾನ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಅನುಮಾನವಿದೆ. ಕಾಂಗ್ರೆಸ್ ಬಿಟ್ಟು ಬಂದು ನಮ್ಮ ಸರ್ಕಾರ ರಚನೆಗೆ ಕಾರಣರಾದ ಎಲ್ಲಾ ಶಾಸಕರನ್ನ ಟಾರ್ಗೆಟ್ ಮಾಡಲಾಗ್ತಿದೆ. ಇದೊಂದು ಪೊಲಿಟಿಕಲ್ ಷಡ್ಯಂತ್ರ ಎನ್ನುವ ಸಂದರ್ಭ ಇದಾಗಿದೆ. ಹೀಗಾಗಿ ನನಗೆ ಅನುಮಾನ. ಸಿಡಿ ವಿಚಾರದಲ್ಲಿ ಎಲ್ಲರಿಗೂ ನೋವಾಗಿದೆ. ಹೀಗಾಗಿ ಎಸ್.ಟಿ.ಸೋಮಶೇಖರ್ ಕೂಡ ಕಾಂಗ್ರೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನ ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆ ಕಾರಣಕ್ಕೆ ನಾನು ಅನುಮಾನ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ.