ಬಳ್ಳಾರಿ: ಈ ಬಾರಿಯ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಯಾರೂ ಆತಂಕ ಪಡಬಾರದು. ಸರ್ಕಾರ ಮತ್ತು ಜಿಲ್ಲಾಡಳಿತ ನಿಮ್ಮ ಜತೆಗಿದೆ ಎಂದು ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಅವರು ರೈತರಿಗೆ ಧೈರ್ಯ ತುಂಬಿದರು. ಇಂದು ಜಿಲ್ಲೆಯ ಸಿರುಗುಪ್ಪ-ಕುರುಗೋಡು ತಾಲೂಕುಗಳ ವ್ಯಾಪ್ತಿಯ ವಿವಿಧ ಗ್ರಾಮಗಳಾದ ರಾರಾವಿ, ಅಗಸನೂರು, ಬೊಮ್ಮಲಾಪುರ, ಕೊತ್ತಲಚಿಂತೆ, ಮಿಟ್ಟೆ ಸುಗೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಬರ ಪರಿಸ್ಥಿತಿ ವೀಕ್ಷಣೆ ಮಾಡಿ, ರೈತರಿಗೆ ಸಾಂತ್ವನ ಹೇಳಿದರು.
ರಾರಾವಿ ಗ್ರಾಮದ ರೈತ ಮಂಜಪ್ಪನ ಹತ್ತಿ ಹೊಲ, ಕೊರವರ ಮಾರೆಪ್ಪನ ಮೆಣಸಿನಕಾಯಿ ಹೊಲಕ್ಕೆ ಭೇಟಿ ನೀಡಿ, ಬೆಳೆ ಪರೀಕ್ಷಿಸಿದರು. ಅದೇ ರೀತಿಯಾಗಿ ಅಗಸನೂರು ಗ್ರಾಮದ ರೈತ ಹುಸೇನಪ್ಪನ ಮೆಣಸಿನಕಾಯಿ ಬೆಳೆ, ಮಿಟ್ಟೆ ಸುಗೂರಿನ ಹನುಮಂತ, ಬೊಮ್ಮಲಾಪುರ ಗ್ರಾಮದ ಮಣಿಯಪ್ಪ ರೈತರ ಮೆಣಸಿನಕಾಯಿ ಬೆಳೆಗಳ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರು ಯಾರೂ ಧೃತಿಗೆಡಬಾರದು, ಸಮೀಕ್ಷೆ ಅನುಸಾರ ಬರ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ರೈತರ ಬೆನ್ನೆಲುಬಾಗಿ ನಿಂತಿದೆ. ಯಾರೂ ಆತಂಕ ಪಡಬಾರದು ಎಂದು ಸಚಿವ ಬಿ.ನಾಗೇಂದ್ರ ಅವರು ರೈತರಿಗೆ ಮನವರಿಕೆ ಮಾಡಿದರು.
ಸಿರುಗುಪ್ಪ ತಾಲೂಕು ಭಾಗದ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 2,300 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ, ಹತ್ತಿ ಬೆಳೆ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿದೆ, ಅಲ್ಲಲ್ಲಿ ಬೆಳೆ ರೋಗ ಅಂಟಿದೆ. ಈಗಾಗಲೇ ಎನ್.ಡಿ.ಆರ್.ಎಫ್ ತಂಡವು ಭೇಟಿ ನೀಡಿದ್ದು, ಸಮೀಕ್ಷೆ ನಡೆಸಿದ್ದಾರೆ" ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಚಿವರಿಗೆ ಗಮನಕ್ಕೆ ತಂದರು.