ಬಳ್ಳಾರಿ: ಕಳೆದ ತಿಂಗಳು ಜಿಲ್ಲೆಯ ಕುರಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚುನಾಯಿ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುರಕ್ಷಿತಾ (3) ಹಾಗೂ ಶಾಂತಕುಮಾರ್ (7) ಮೃತ ಮಕ್ಕಳು. ಮನೆ ಮುಂದೆ ಆಟ ಆಡುವಾಗ ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ ಮಾಡಿದೆ.
ಹುಚ್ಚುನಾಯಿ ಕಡಿದ ವಿಷಯವನ್ನು ಪಾಲಕರು ವೈದ್ಯರಿಂದ ಮುಚ್ಚಿಟ್ಟು, ಮಗು ಬಿದ್ದು ಗಾಯ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ, ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಟಿಟಿ ಇಂಜೆಕ್ಷನ್ ಹಾಕಿ ಕಳಿಸಿದ್ದಾರೆ. ಇದಾದ ಬಳಿಕ ಮಕ್ಕಳಲ್ಲಿ ರೇಬೀಸ್ ರೋಗದ ಲಕ್ಷಣಗಳು ಕಂಡು ಬಂದಿವೆ. ನಂತರ ಶಾಂತಕುಮಾರ್ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನ.22 ರಂದು ಮೃತಪಟ್ಟಿದ್ದಾನೆ.