ವಿಜಯನಗರ :ವಿಶ್ವವಿಖ್ಯಾತ ಹಂಪಿ ಉತ್ಸವದ ಆಚರಣೆಯ ಭಾಗವಾಗಿ ಜನವರಿ 26ರಂದು ನಡೆದ ‘ವಿಜಯನಗರ ವಸಂತ ವೈಭವ’ ಕಲಾ ಪ್ರದರ್ಶನ ಅಕ್ಷರಶಃ ಜನಮನ ಸೂರೆಗೊಂಡಿತು. ಕಲಾ ಪ್ರದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಜಯನಗರಕ್ಕೆ ಆಗಮಿಸಿದ್ದ ಕಲಾ ತಂಡಗಳು ನಗರದ ವಡಕರಾಯ ದೇವಸ್ಥಾನದ ಬಳಿ ಸಂಜೆಯ ಹೊತ್ತಿಗೆ ಸಮಾವೇಶಗೊಂಡು ಪ್ರದರ್ಶನಕ್ಕೆ ಬೇಕಾದ ಸಲಕರಣೆ ಸಿದ್ಧಪಡಿಸಿಕೊಂಡು, ಪೋಷಾಕಿನೊಂದಿಗೆ ಮೆರವಣಿಗೆಗೆ ಸನ್ನದ್ಧರಾಗಿದ್ದರು.
ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ನಂತರ ಹಸಿರು ನಿಶಾನೆ ತೋರಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಭುವನೇಶ್ವರಿ ದೇವಿಯನ್ನು ಹೊತ್ತು ಸಾಗಿದ ವಾಹನದ ಮುಂಭಾಗದಲ್ಲಿ ಹಂಪಿಯ ಆನೆ ಲಕ್ಷ್ಮಿ ಹೆಜ್ಜೆ ಹಾಕಿ ಗಮನ ಸೆಳೆಯಿತು.
ವಾಹನ ಚಾಲನೆ ಮಾಡಿದ ಆನಂದ್ ಸಿಂಗ್:ಮತ್ತೊಂದೆಡೆ ಭುವನೇಶ್ವರಿ ಹೊತ್ತ ತೆರೆದ ವಾಹನವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಖುದ್ದು ಚಲಾಯಿಸಿದರು. ಸಚಿವರು ಸಾರ್ವಜನಿಕರತ್ತ ಕೈಬೀಸಿ ನಮಸ್ಕರಿಸಿ ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳು ಸಚಿವರೊಂದಿಗೆ ನಿಂತು ಫೋಟೊ ತೆಗೆಸಿಕೊಂಡರು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಶಶಿಕಲಾ ಜೊಲ್ಲೆ ಕಲಾತಂಡದ ಜೊತೆಗೆ ಡೊಳ್ಳು ಬಾರಿಸುವ ಮೂಲಕ ಸಂಭ್ರಮಿಸಿದರು.