ಅಥಣಿ :ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ಕಾಲುವೆಗಳ ಮುಖಾಂತರ ರೈತರ ಜಮೀನಿಗೆ ನೀರು ಹರಿಸುವಂತೆ ತಾಲೂಕಿನ ರೈತರಿಂದ ಒತ್ತಾಯ ಕೇಳಿಬರುತ್ತಿದ್ದಂತೆಯೇ, ಎಚ್ಚೆತ್ತ ತಾಲೂಕು ಆಡಳಿತ ತಾಲೂಕಿನ ಪೂರ್ವಭಾಗದ ಕಾಲುವೆ ಮೂಲಕ ನೀರು ಹರಿಸಿದೆ.
ಮೇ ಕೊನೆವಾರದಲ್ಲಿ ವಾಡಿಕೆಯಂತೆ ಮಳೆ ಸುರಿದಿದ್ದರಿಂದ, ಸಾಕಷ್ಟು ರೈತರು ಬಿತ್ತನೆ ಕಾರ್ಯ ಮಾಡಿದರು. ಬಿತ್ತನೆಯ ನಂತರ ಮಳೆ ಕೈಕೊಟ್ಟಿದ್ದರಿಂದ ರೈತರಲ್ಲಿ ಆತಂಕ ಮೂಡಿತ್ತು. ಕೃಷ್ಣಾ ನದಿಯಲ್ಲಿ ನೀರಿದ್ರೂ ಕಾಲುವೆಗೆ ನೀರು ಹರಿಸುತ್ತಿಲ್ಲ ಎಂದು ತಾಲೂಕು ಆಡಳಿತ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ತಾಲೂಕಿನಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ, ಬೆಳಗ್ಗೆ 6 ಗಂಟೆ ಸುಮಾರಿಗೆ ಕರಿಮಸೂತಿ ಏತ ನೀರಾವರಿ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ನಿರಾವರಿ ಅಭಿಯಂತರರಾದ ಬಿ ಎಸ್ ಚಂದ್ರಶೇಖರ್ ಚಾಲನೆ ನೀಡಿದರು.
ಅಥಣಿ ಕಾಲುವೆಗಳಿಗೆ ನೀರು ಹರಿಸಿದ ತಾಲೂಕು ಆಡಳಿತ.. ನಂತರದಲ್ಲಿ ಮಾತನಾಡಿದ ಅವರು, ಕೆಲವು ತಾಂತ್ರಿಕ ದೋಷಗಳಿಂದ ನೀರು ಬಿಡುವುದಕ್ಕೆ ವಿಳಂಬವಾಯಿತು. ಆದರೂ ತ್ವರಿತಗತಿಯಲ್ಲಿ ಕೆಲಸ ಮಾಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಕಾಲುವೆ ಮೂಲಕ ನೀರು ಹರಿಸುತ್ತಿದ್ದೇವೆ ಎಂದರು. ನೀರು ಅತಿಮುಖ್ಯ, ರೈತರು ಮಿತವಾಗಿ ಬಳಸಿ, ಸದ್ಬಳಕೆ ಮಾಡಿಕೊಳ್ಳಬೇಕು. ಹಂತ ಹಂತವಾಗಿ ನೀರಿನ ಪಂಪ್ಗಳನ್ನು ಪ್ರಾರಂಭ ಮಾಡುತ್ತೇವೆ, ರೈತರಿಗೆ ಶುಭವಾಗಲಿ ಎಂದು ಹಾರೈಸಿದರು.
ಈಟಿವಿ ಭಾರತ ಫಲಶ್ರುತಿ: ಇದೇ ತಿಂಗಳ 16 ರಂದು, ಕೃಷಿ ಜಮೀನುಗಳಿಗೆ ಕಾಲುವೆ ನೀರು ಹರಿಸಿ, ಸರ್ಕಾರಕ್ಕೆ ಅಥಣಿ ರೈತರ ಒತ್ತಾಯ ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿತ್ತು. ಅದರ ಬೆನ್ನಲ್ಲೇ ತಾಲೂಕಿನಲ್ಲಿ ರೈತರ ಕೂಗು ಹೆಚ್ಚಾಯಿತು. ನಂತರ ಕಾಂಗ್ರೆಸ್ ಮುಖಂಡರಿಂದ ನೀರು ಹರಿಸುವಂತೆ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರು. ಇವತ್ತು ಮುಂಜಾನೆ 6 ಗಂಟೆಯಿಂದ ಕಾಲುವೆಗಳಿಗೆ ನೀರು ಹರಿಯುತ್ತಿರುವುದರಿಂದ ರೈತರಲ್ಲಿ ಹರ್ಷ ಮನೆ ಮಾಡಿದೆ.