ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದರು. ಬೆಳಗಾವಿ:ಪ್ರಧಾನಿ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದರು. ''ಕಾಂಗ್ರೆಸ್ ಪಕ್ಷ ಇಂತಹ ನಿರ್ಲಜ್ಜ ಪಕ್ಷವಂದ್ರೆ ಮೋದಿ ಸಾವಿನ ಕೂಪಕ್ಕೆ ತಳ್ಳುವ ಆಹ್ವಾನ ನೀಡಿದೆ'' ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೋದಿಯವರ ತಂದೆ ಬಗ್ಗೆ ಅಪಮಾನ ಮಾಡಿದ ಕಾಂಗ್ರೆಸ್- ಆರೋಪ:ಬೆಳಗಾವಿ ತಾಲೂಕಿನ ಹಿಂಡಲಗಾದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ''ನರೇಂದ್ರ ಮೋದಿಯವರ ಶತಾಯುಷಿ ತಾಯಿ ಬಗ್ಗೆ ಅವಹೇಳನ ಮಾಡಿದ್ದ ಪಕ್ಷ ಕಾಂಗ್ರೆಸ್. ನರೇಂದ್ರ ಮೋದಿಯವರ ತಂದೆ ಬಗ್ಗೆ ಅಪಮಾನ ಮಾಡಿದ ನಿರ್ಲಜ್ಜ ಪಕ್ಷವಿದು. ನಾನು ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಹೇಳ ಬಯಸುತ್ತೇನೆ. ನೀವು ಇಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದೀರಿ. ಆ ರಾಜಕೀಯ ಪಕ್ಷದ ಇತಿಹಾಸ ಹೇಗಿದೆ ಎಂದರೆ, ದಲಿತ ನಾಯಕನಾದ್ರೆ ರಾಹುಲ್ ಗಾಂಧಿ ತಮ್ಮ ಚಪ್ಪಲಿಯನ್ನು ಅವರಿಂದ ತೆಗೆಸುತ್ತಾರೆ'' ಎಂದು ತೀವ್ರ ವಾಗ್ದಾಳಿ ನಡೆಸಿದರು.
ಎಸ್‌ಡಿಪಿಐ ಬೆಂಬಲ ಕೇಳುತ್ತೆ ಕಾಂಗ್ರೆಸ್:''ದೇಶದಲ್ಲಿ ಮೊದಲ ಬಾರಿ ಆದಿವಾಸಿ ಮಹಿಳೆಗೆ ರಾಷ್ಟ್ರಪತಿ ಅಭ್ಯರ್ಥಿ ಮಾಡಿದ್ರೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವಂತ ಪಕ್ಷ ಕಾಂಗ್ರೆಸ್. ನಿಮ್ಮ ಪಕ್ಷ ಹಿಂದೂ ಸಮಾಜಕ್ಕೆ ಅಪಮಾನ ಮಾಡುವವರನ್ನು ಸ್ಟಾರ್ ಪ್ರಚಾರಕರಾಗಿ ಮಾಡಿದೆ. ಕಾಂಗ್ರೆಸ್ ಎಸ್‌ಡಿಪಿಐ ಬೆಂಬಲ ಕೇಳುತ್ತೆ. ಪಿಎಫ್ಐ ಗೂಂಡಾಗಳನ್ನು ಬಿಡುಗಡೆ ಮಾಡುವ ಮಾತುಗಳನ್ನಾಡುತ್ತೆ'' ಎಂದು ಸ್ಮೃತಿ ಇರಾನಿ ಗಂಭೀರ ಆರೋಪ ಮಾಡಿದರು.
ನಿಮಗೆ ಈ ಅಭದ್ರತೆ ಶೋಭೆ ತರಲ್ಲ:''ಇಂದು ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಗೆ ಬೈಯುತ್ತಿದ್ದಾರೆ. ಖರ್ಗೆ ಸಾಹೇಬರು ವಯಸ್ಸಿನಲ್ಲಿ ನನಗಿಂತ ದೊಡ್ಡವರು. ನಿಮಗೆ ಈ ಅಭದ್ರತೆ ಶೋಭೆ ತರಲ್ಲ ನಿಮಗೂ ಗೊತ್ತು. ನಮಗೂ ಗೊತ್ತು ಮೇಡಂ ಆದೇಶ ಬಂದಿದ್ದಕ್ಕೆ ನರೇಂದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಬೈದಿದ್ದಾರೆ'' ಎಂದ ಅವರು, ''ನಾನು ಗಾಂಧಿ ಕುಟುಂಬಕ್ಕೆ ಹೇಳಬಯಸುತ್ತೇನೆ. ನೀವು ಮೋದಿ ಸಾವು ಬಯಸಿದ್ರೆ ಕರ್ನಾಟಕದ ಮಹಿಳೆಯರು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡ್ತಾರೆ. ಇಂದು ಮೋದಿ ಗೆಲ್ಲಿಸುವಂತೆ ಮಹಿಳೆಯರಿಗೆ ವಿಶೇಷ ಪ್ರಾರ್ಥನೆ ಮಾಡುತ್ತೇನೆ'' ಎಂದರು.
ಡಿಕೆಶಿ ಹಾಗೂ ಸಿದ್ದರಾಮಯ್ಯ ಜಗಳ ಎಲ್ಲರಿಗೂ ಗೊತ್ತು:ಕೋವಿಡ್ ವೇಳೆ ಕಾಂಗ್ರೆಸ್ ಸರ್ಕಾರ ಇದ್ರೆ ಉಚಿತ ವ್ಯಾಕ್ಸಿನ್ ಸಿಗುತ್ತಿತ್ತಾ ಎಂದು ಪ್ರಶ್ನಿಸಿದ ಸ್ಮೃತಿ ಇರಾನಿ ಅವರು, ಒಂದು ಇಂಜೆಕ್ಷನ್ ಬೆಲೆ 600ರೂ., ಮೂರು ಡೋಸ್ ವ್ಯಾಕ್ಸಿನ್‌ಗೆ 1800 ರೂ. ಆಗುತ್ತಿತ್ತು. ಆದರೆ, ಉಚಿತವಾಗಿ ನಮ್ಮ ಸರ್ಕಾರ ವ್ಯಾಕ್ಸಿನ್ ನೀಡಿದೆ. ಕಾಂಗ್ರೆಸ್ ಪಕ್ಷ ಮೋದಿ ಹಠಾವೋ, ವ್ಯಾಕ್ಸಿನ್ ಹಠಾವೋ ವಿದೇಶದಿಂದ ವ್ಯಾಕ್ಸಿನ್ ತರಿಸಿ ಅನ್ನುತ್ತಿದ್ರು. ವಿಶ್ವದ 160 ದೇಶಗಳಿಗೆ ಭಾರತದ ವ್ಯಾಕ್ಸಿನ್ ಹೋಗಿದೆ. ವಿನಮ್ರತೆಯಿಂದ ನಾನು ಖರ್ಗೆಯವರಿಗೆ ಹೇಳಬಯಸುವೆ. ಕರ್ನಾಟಕ ಚುನಾವಣೆ ಸೋಲುವರಿದ್ದೀರಿ, ಅದಕ್ಕೆ ಹೀಗೆ ಹೇಳುತ್ತಿದ್ದೀರಿ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಗಳ ಎಲ್ಲರಿಗೂ ಗೊತ್ತು. ನಾವು ರಾಜ್ಯದ ಜನರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ'' ಎಂದ ಸ್ಮೃತಿ ಇರಾನಿ ತಿರುಗೇಟು ಕೊಟ್ಟರು.
ಪ್ರಚಾರ ಸಭೆಯಲ್ಲಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಕಿರಣ ಜಾಧವ್, ಡಾ. ಸೋನಾಲಿ ಸರ್ನೋಬತ್, ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ:ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ: ಪ್ರಧಾನಿಯವರ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ