ಬೆಳಗಾವಿ: ಇಡೀ ದೇಶದಲ್ಲಿ 40 ಪರ್ಸೆಂಟ್ ಸರ್ಕಾರ ಎಂದು ಕುಖ್ಯಾತಿ ಪಡೆದಿರುವ ಲೂಟಿಕೋರ ಸರ್ಕಾರ ಕಿತ್ತೊಗೆದು ಯುವ ಜನಾಂಗದ ಭವಿಷ್ಯ ರೂಪಿಸುವ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕದಲ್ಲಿ ತಂದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತದಾರರಲ್ಲಿ ಮನವಿ ಮಾಡಿದರು.
ಖಾನಾಪುರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಭವ್ಯ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಕರ್ನಾಟಕದಲ್ಲಿ ಲೂಟ್ ಜೂಟ್ ಕಿ ಸರ್ಕಾರದ ಅಧಿಕಾರದಿಂದ ಮೂರು ವರ್ಷದಲ್ಲಿ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಸರ್ವರ ಏಳ್ಗೆಗಾಗಿ ಕಾಂಗ್ರೆಸ್ನ್ನು ಜನತೆ ಬೆಂಬಲಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ವೇತನವನ್ನು 15 ಸಾವಿರ ರೂ. ಹೆಚ್ಚಿಸಲಾಗುವುದು. ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ಹಾಗೂ ಬಿಸಿಯೂಟ ನೌಕರರಿಗೆ 5 ಸಾವಿರ ರೂಪಾಯಿ ವೇತನ ನೀಡಲಾಗುವುದು ಎನ್ನುವ ಮೂಲಕ ಕಾಂಗ್ರೆಸ್ ನ ಮತ್ತೊಂದು ಗ್ಯಾರಂಟಿ ಯೋಜನೆಯನ್ನು ಪ್ರಿಯಾಂಕಾ ಗಾಂಧಿ ಘೋಷಿಸಿದರು.
ತಮ್ಮ ಭಾಷಣದಲ್ಲಿ ನಿರುದ್ಯೋಗ ಸಮಸ್ಯೆ ಪ್ರಸ್ತಾಪಿಸಿದ ಅವರು, ನಿಮಗೆಲ್ಲಾ ಸರ್ಕಾರಿ ನೌಕರಿ ಸಿಕ್ಕಿದೆಯಾ ಎಂದು ಸಭೆಯಲ್ಲಿ ಭಾಗವಹಿಸಿದ್ದ ಯುವಕರನ್ನು ಪ್ರಶ್ನಿಸಿದರು. ಆಗ ಇಲ್ಲವೆಂಬ ಉತ್ತರ ವೇದಿಕೆಯತ್ತ ಬಂತು. ಮಾತು ಮುಂದುವರಿಸಿದ ಪ್ರಿಯಾಂಕಾ ರಾಜ್ಯದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿವೆ. ಅವುಗಳನ್ನು ಭರ್ತಿ ಮಾಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಬಿಇ, ಬಿಟೆಕ್ ಕಲಿತವರಿಗೆ ಉದ್ಯೋಗ ಇಲ್ಲ. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಪ್ರತಿ ಹುದ್ದೆಗೂ ಇಂತಿಷ್ಟು ಅಂತ ಲಂಚ ನಿಗದಿಪಡಿಸಿದೆ. ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಈ ಸರ್ಕಾರ ಶಾಲೆ ಹಾಗೂ ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸುವ ಮೊಟ್ಟೆಯನ್ನೂ ಬಿಟ್ಟಿಲ್ಲ ಎಂದು ಹರಿಹಾಯ್ದರು.
ಸರ್ಕಾರಿ ಗುತ್ತಿಗೆದಾರರ ಸಂಘ ಪತ್ರ ಬರೆದರೂ ಪ್ರಧಾನಮಂತ್ರಿ ಮೋದಿ ಯಾವುದೇ ರೀತಿ ಉತ್ತರ ನೀಡಲಿಲ್ಲ. ನಿಮಗೆ ಇಂತಹ ಸರ್ಕಾರವೇ ಮತ್ತೆ ಐದು ವರ್ಷ ಬೇಕೆ ಎಂದು ಪ್ರಿಯಾಂಕಾ ಪ್ರಶ್ನಿಸಿದರು.