ಬೆಳಗಾವಿ : ಕಾಂಗ್ರೆಸ್ ದಲ್ಲಾಳಿಗಳ ಪಕ್ಷ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಏನೇನೋ ಹೇಳ್ತಾರೆಂದು ನಾವು ಉತ್ತರಿಸಲಿಕ್ಕೆ ಆಗದು. ಅವರೇನು ಶುದ್ಧ ಹಸ್ತರಾ? ಕಾಂಗ್ರೆಸ್ ದಲ್ಲಾಳಿಗಳ ಪಾರ್ಟಿ ಆದ್ರೆ ಇವರೇನು ಮಾಡ್ತಿದಾರೆ? ಬೆಂಗಳೂರಲ್ಲಿ ಗುತ್ತಿಗೆದಾರರನ್ನು, ಅಧಿಕಾರಿಗಳನ್ನು ಕೇಳಿದ್ರೆ ಅವರ ಬಾಯಿಂದಲೇ ಹೇಳ್ತಾರೆ. ಬಾಯಿಗೆ ಬಂದಂತೆ ಮಾತನಾಡುವುದು ಬಿಜೆಪಿಯವರ ಚಾಳಿಯಾಗಿಬಿಟ್ಟಿದೆ. ಈಗ ಬಿಜೆಪಿಯವರು ಏನು ಮಾಡ್ತಿದ್ದಾರೆ ಅನ್ನೋದು ಗೊತ್ತು. ಹೇಗೆ ಡೀಲಿಂಗ್ಸ್ ಆಗುತ್ತಿವೆ, ಎಲ್ಲಿ ದುಡ್ಡು ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಅಧಿಕಾರಿಗಳು, ಗುತ್ತಿಗೆದಾರರು ಹೇಳುತ್ತಾರೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (ಸಂಗ್ರಹ ಚಿತ್ರ) ರಾಜಕಾರಣಕ್ಕೆ ಬರುವಾಗ ಡಿಕೆಶಿ ಆಸ್ತಿ ಎಷ್ಟಿತ್ತು ಈಗ ಎಷ್ಟಿದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ, ಅದನ್ನು ಏಜೆನ್ಸಿಯವರು ತನಿಖೆ ಮಾಡ್ತಾರೆ. ಬಿಜೆಪಿಯವರು ಏನು ರಾಜಕೀಯವಾಗಿ ಆಸ್ತಿ ಮಾಡಿಲ್ವಾ? ಇವರ ಹತ್ತಿರ ದುಡ್ಡೇ ಇಲ್ವಾ? ಎಲ್ಲರಿಗೂ ಒಂದೇ ನ್ಯಾಯ ಸಿಗಬೇಕು ಎಂಬುದು ನಮ್ಮ ಆಗ್ರಹ. ಡಿ.ಕೆ. ಶಿವಕುಮಾರ್ ಒಬ್ಬರನ್ನೇ ಏಕೆ ಟಾರ್ಗೆಟ್ ಮಾಡ್ತಿದಾರಾ? ಎಲ್ಲರನ್ನೂ ಒಂದೇ ರೀತಿ ನೋಡಿ ಎಂಬುದು ನಮ್ಮ ವಾದ. ಕೇವಲ ಕಾಂಗ್ರೆಸ್ ಪಕ್ಷದವರನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ? ಮಾಧ್ಯಮದವ್ರು ಕೇಳಿದ್ದಾರೆ ಅಂತ ಅವರು ಏನೇನೋ ಹೇಳಿ ಹೋಗಿದ್ದಾರೆ. ಅಷ್ಟಕ್ಕೇ ಅದು ಎಂಡ್ ಆಗಲ್ಲ.
ರಾಜ್ಯ ಮತ್ತು ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ. ನಮ್ಮ ಸರ್ಕಾರ ಹೇಗೆ ನಡೆದಿದೆ ಎಂಬುವುದನ್ನು ಅವರು ನೋಡಬೇಕು. ಹಿಂದೆ ಮೋದಿ ರಾಜ್ಯಕ್ಕೆ ಬಂದಾಗ 10 ಪರ್ಸೆಂಟ್ ಸರ್ಕಾರ ಅಂತಾ ಭಾಷಣ ಮಾಡಿದ್ರು. ಈಗ ಬಿಜೆಪಿ ಸರ್ಕಾರ 30 ಪರ್ಸೆಂಟ್ ಆಗಿದೆ. ರಾಜಕೀಯದಲ್ಲಿ ಯಾರು ಸತ್ಯ ಹರಿಶ್ಚಂದ್ರರಲ್ಲ. ಆದರೂ ಒಂದು ಇತಿಮಿತಿ ಇರುತ್ತದೆ. ವಸ್ತುಸ್ಥಿತಿಯನ್ನು ಪ್ರಹ್ಲಾದ್ ಜೋಶಿ ಮುಚ್ಚಿಟ್ಟಿದ್ದಾರೆ. ತಮ್ಮ ಸರ್ಕಾರದಲ್ಲಿ ಏನಾಗ್ತಿದೆ, ಏನು ಪರಿಸ್ಥಿತಿ ಇದೆ ನೋಡಿ ಹೇಳಬೇಕು. ಸುಮ್ಮನೆ ಯಾರದ್ದೋ ಮೇಲೆ ಆರೋಪ ಮಾಡೋದಲ್ಲ. ವಸ್ತುಸ್ಥಿತಿ ಹೇಳಿದ್ರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ