ಬೆಳಗಾವಿ:ಬೃಹತ್ ಕೈಗಾರಿಕೆಗಳು, ಐಟಿ-ಬಿಟಿ ಕಂಪನಿಗಳು ಬೆಂಗಳೂರು ಕೇಂದ್ರಿತವಾಗಿವೆ. ಇದರಿಂದ ಉತ್ತರ ಕರ್ನಾಟಕ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇದೆ. ಹಾಗಾಗಿ, ಈ ಬಾರಿಯ ಅಧಿವೇಶನದಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಬೆಂಗಳೂರು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯ ಕೇಳಿಬಂದಿದೆ.
ಹುಟ್ಟಿದ ಊರು, ಮನೆ, ತಂದೆ ತಾಯಿಯನ್ನು ಬಿಟ್ಟು ಉದ್ಯೋಗಕ್ಕಾಗಿ ದೂರದ ಬೆಂಗಳೂರಿಗೆ ಹೋಗುವ ಈ ಭಾಗದ ಯುವಕರ ಕಷ್ಟದ ಜೀವನ ಹೇಳತೀರದಾಗಿದೆ. ದುಬಾರಿ ಬೆಲೆ ತೆತ್ತು ಜೀವನ ಸಾಗಿಸಬೇಕು. ಅದರಲ್ಲಿ ಉಳಿದರೆ ಮಾತ್ರ ಊರಲ್ಲಿರುವ ತಂದೆ ತಾಯಿಗೆ ಹಣ ಕಳಿಸಬೇಕು. ಹಾಗಾಗಿ ಆಯಾ ಜಿಲ್ಲೆ, ತಾಲ್ಲೂಕುಗಳಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ. ಆ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ದಿಟ್ಟ ನಿರ್ಧಾರವನ್ನು ಕರ್ನಾಟಕ ಸರ್ಕಾರವೂ ತೆಗೆದುಕೊಳ್ಳಲಿ ಎಂದು 'ಈಟಿವಿ ಭಾರತ್' ಜೊತೆಗೆ ಮಾತನಾಡುತ್ತಾ ಬೆಳಗಾವಿಯ ಉದ್ಯಮಿ ರೋಹನ್ ಜುವಳಿ ಒತ್ತಾಯಿಸಿದರು.
ಏನಿದು ಮಹಾರಾಷ್ಟ್ರ ಮಾದರಿ?:ಮುಂಬೈ ಮಹಾನಗರದಲ್ಲಿ ಮುಂದಿನ 25 ವರ್ಷಗಳ ಕಾಲ ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡದೇ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಹಾಲಿಡೇಯನ್ನು ಮಹಾರಾಷ್ಟ್ರ ಸರ್ಕಾರ ಅನುಸರಿಸುತ್ತಿದೆ. ಇದರ ಪರಿಣಾಮ ಮಹಾರಾಷ್ಟ್ರದ ಪ್ರತಿ ಜಿಲ್ಲೆ, ತಾಲೂಕುಗಳಲ್ಲೂ ಕೈಗಾರಿಕೆಗಳು ಸ್ಥಾಪನೆಯಾಗಿ, ಯುವಕರಿಗೆ ಉದ್ಯೋಗ ಸಿಗುತ್ತಿದ್ದು, ಹೆಚ್ಚಿನ ತೆರಿಗೆ ಕೂಡ ಸಂಗ್ರಹವಾಗುತ್ತಿದೆ. ಅದೇ ಮಾದರಿಯಲ್ಲಿ ಬೆಂಗಳೂರಿಗೂ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಹಾಲಿಡೇ ಘೋಷಿಸಿ ಕರ್ನಾಟಕದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕೆಂದು ರೋಹನ್ ಜುವಳಿ ಮನವಿ ಮಾಡಿದ್ದಾರೆ.