ಚಿಕ್ಕೋಡಿ: ಗೋಮಾಳ ಜಾಗದ ಅತಿಕ್ರಮಣ ತೆರವುಗೊಳಿಸಲು ಮುಂದಾದ ರಾಯಬಾಗ ತಾಲೂಕು ದಂಡಾಧಿಕಾರಿ ಚಂದ್ರಕಾಂತ ಭಜಂತ್ರಿ ಅವರನ್ನು ಬೇರೆಡೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
ಕೆಲ ದಿನಗಳ ಹಿಂದೆ ಸ್ಥಳೀಯ ಶಾಸಕ ದುರ್ಯೋಧನ ಐಹೊಳೆ ಪತ್ರದ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ರಾಯಬಾಗ ತಹಶೀಲ್ದಾರ್ ಭಜಂತ್ರಿ ಅವರನ್ನು ಮಾತೃ ಇಲಾಖೆಯಾದ ಸರ್ಕಾರದ ಸಚಿವಾಲಯಕ್ಕೆ ಮರಳಿ ಕಳುಹಿಸಬೇಕೆಂದು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಭಜಂತ್ರಿ ಅವರನ್ನು ಎತ್ತಂಗಡಿ ಮಾಡಿದ್ದಾರೆ.
ಕಂಕಣವಾಡಿ ಪಟ್ಟಣದ ನಿವಾಸಿಗಳಿಂದ ಪಟ್ಟಣದ ಸರ್ಕಾರಿ ಗೈರಾಣ ಜಮೀನು ಅತಿಕ್ರಮಣ ವಿಚಾರದಲ್ಲಿ ಶಾಸಕ ದುರ್ಯೋಧನ ಐಹೊಳೆ ಮತ್ತು ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ನಡುವೆ ತಿಕ್ಕಾಟ ನಡೆದಿತ್ತು ಎಂಬ ಮಾತಗಳು ಕೇಳಿ ಬಂದಿದ್ದವು. ಸರ್ಕಾರಿ ಗೈರಾಣ ಜಮೀನನ್ನು ಖಾಲಿ ಮಾಡಿಸಲು ರಾಯಬಾಗ ತಹಶೀಲ್ದಾರ್ ಕಾನೂನಿನ ಪ್ರಕಾರ ಕೈಗೊಳ್ಳುತ್ತಿದ್ದರು. ಇದರಿಂದ ಕಂಕಣವಾಡಿ ಪಟ್ಟಣದ ನಿವಾಸಿಗಳು ಸರ್ಕಾರ ಮತ್ತು ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಪ್ರತಿಭಟನೆ ಮಾಡಿದ್ದರು. ಈ ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಐಹೊಳೆ ನಿವಾಸಿಗಳಿಗೆ ಭರವಸೆ ನೀಡಿದ್ದರು.
ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಸರ್ಕಾರಿ ಜಮೀನು ಅತಿಕ್ರಮಣ ಸೇರಿದಂತೆ ವಿವಿಧ ಪ್ರಕರಣದಡಿ 150 ಜನರ ಮೇಲೆ ಪ್ರಕರಣ ದಾಖಲಿಸಿದ್ದರು. ಯಾವುದೇ ವಿಚಾರಗಳನ್ನು ಶಾಸಕರ ಗಮನಕ್ಕೆ ತರದೆ ತಹಶೀಲ್ದಾರ್ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ಗರಂ ಆಗಿದ್ದರು ಎಂದು ಹೇಳಲಾಗುತ್ತಿತ್ತು.