ಬೆಳಗಾವಿ : ನವೆಂಬರ್ 1 ರಂದು ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡದ ಝೇಂಕಾರ ಮೊಳಗುತ್ತದೆ. ಇಲ್ಲಿನ ರಾಜ್ಯೋತ್ಸವ ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿ ರಾಜ್ಯದ ನಾನಾ ಮೂಲೆಗಳಿಂದ ಕನ್ನಡಿಗರು ಬರುತ್ತಿದ್ದಾರೆ. ಅದರಂತೆ ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೆ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ರಜೆ ಹಾಕಿ ಬಂದಿರುವುದು ವಿಶೇಷವಾಗಿದೆ.
ಕಳೆದ 10 ವರ್ಷಗಳಿಂದ ತಪ್ಪದೇ ಕನ್ನಡ ರಾಜ್ಯೋತ್ಸವಕ್ಕೆ ಆಗಮಿಸುತ್ತಿರುವ ಈ ವಿಶೇಷ ಕನ್ನಡ ಅಭಿಮಾನಿ ಅಮಿತ್ ರಾಮಚಂದ್ರ ಮಿರಜಕರ್ ಎಂಬುವವರು ಮೂಲತಃ ಬೆಳಗಾವಿ ಅವರೇ ಆಗಿದ್ದಾರೆ. ಅವರು ತನ್ನ 8 ತಿಂಗಳ ಪುಟ್ಟ ಕಂದಮ್ಮ ಐಸಿರಿ ಮತ್ತು ತಾಯಿ ಗೀತಾ ಜೊತೆಗೆ ಆಗಮಿಸಿದ್ದಾರೆ. ಇವರ ಕುಟುಂಸ್ಥರು ಅಪ್ಪಟ್ಟ ಕನ್ನಡ ಅಭಿಮಾನಿಗಳಾಗಿದ್ದು, ರಾಜ್ಯೋತ್ಸವಕ್ಕೆ ಒಂದು ದಿನ ಮೊದಲೇ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಇಲ್ಲಿನ ಹಬ್ಬದ ವಾತಾವರಣ ಕಂಡು ಹರ್ಷಗೊಂಡಿದ್ದಾರೆ.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅಮಿತ್ ಮಿರಜಕರ್, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗಲ್ಲಿ ಗಲ್ಲಿಗೆ.. ಬೆಳಗಾವಿಯ ರಾಜ್ಯೋತ್ಸವ ಎಂದರೆ ಅದೊಂದು ಸ್ವರ್ಗದ ಅನುಭವ ನೀಡುತ್ತದೆ. ಹತ್ತು ವರ್ಷಗಳಿಂದ ಒಂದು ವರ್ಷವೂ ತಪ್ಪದೇ ರಾಜ್ಯೋತ್ಸವಕ್ಕೆ ಬರುತ್ತಿದ್ದೇನೆ. ಈ ವರ್ಷವೂ ರಜೆ ಹಾಕಿ ನನ್ನ 8 ತಿಂಗಳ ಮಗಳು ಐಸಿರಿ ಮತ್ತು ತಾಯಿ ಗೀತಾ ಜೊತೆಗೆ ಆಗಮಿಸಿದ್ದೇನೆ. ಇಲ್ಲಿನ ಸಿದ್ಧತೆ ನೋಡಿ ಬಹಳಷ್ಟು ಖುಷಿ ಆಗುತ್ತದೆ. ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಆನಂದಿಸಲು ತುದಿಗಾಲಲ್ಲಿ ನಿಂತಿದ್ದೇನೆ. ರಾಜ್ಯೋತ್ಸವ ದಿನ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಚನ್ನಮ್ಮನ ಆಶೀರ್ವಾದ ಪಡೆದು, ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸುತ್ತೇನೆ ಎಂದು ಹೇಳಿದರು.