ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತು ಬೆಳಗಾವಿ/ಬೆಂಗಳೂರು: ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ರೈತರ 2 ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ವಿಧಾನಸಭೆಯಲ್ಲಿಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಿಯಮ 69ರಡಿಯಲ್ಲಿ ಬರದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ತಾಯಿ ಹೃದಯ ಇರಬೇಕು. ಆದರೆ ಈ ಸರ್ಕಾರಕ್ಕೆ ಏನು ಸಮಸ್ಯೆಯಾಗಿದೆ ಅಂತ ಗೊತ್ತಿಲ್ಲ. ಕಟುಕನ ರೀತಿ ವರ್ತಿಸುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ತಡೆಯಬೇಕು. ಹದಿನಾಲ್ಕು ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಪರಿಹಾರ ಕೊಡಲು ಸಮಸ್ಯೆ ಏನು ಎಂದು ಪ್ರಶ್ನಿಸಿದರು. ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕು. ಇದರಲ್ಲಿ ರಾಜಕೀಯ ಮಾಡಬೇಡಿ. ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ 2 ಲಕ್ಷ ರೂ.ಗಳವರೆಗೆ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಜೆಡಿಎಸ್‌ನ ಹಿರಿಯ ನಾಯಕ ಹೆಚ್.ಡಿ.ರೇವಣ್ಣ, 2 ಲಕ್ಷ ರೂ. ಅಲ್ಲ. ಎಲ್ಲ ರೈತರ ಕೃಷಿ ಸಾಲವನ್ನು ಮನ್ನಾ ಮಾಡಿ. ಹೇಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಇನ್ನು ಸ್ವಲ್ಪ ದಿನ ಅಭಿವೃದ್ಧಿ ಕಾರ್ಯ ನಡೆಯದಿದ್ದರೂ ಪರವಾಗಿಲ್ಲ. ರೈತರ ಸಾಲಮನ್ನಾ ಮಾಡಿ ಎಂದು ಆಗ್ರಹಿಸಿದರು.
ಬಳಿಕ ಮಾತು ಮುಂದುವರೆಸಿದ ಆರ್.ಅಶೋಕ್, ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರೈತರ ಪಾಲಿಗಂತೂ ಈ ಸರ್ಕಾರ ಸತ್ತಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ನೀವು ರೈತರಿಗೆ 2 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದೀರಿ. ಆ ಪರಿಹಾರ ರೈತರಿಗೆ ತಲುಪಿಲ್ಲ. ಪರಿಹಾರ ಮೊತ್ತವನ್ನು ಹೆಚ್ಚಿಸಿ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಕೃತಿ ವಿಕೋಪಗಳಾದ ತಕ್ಷಣ ಸ್ಪಂದಿಸುತ್ತಿದ್ದೆವು. ಈ ಸರ್ಕಾರದಿಂದ ಆ ಕೆಲಸ ಆಗಿಲ್ಲ ಎಂದು ಟೀಕಿಸಿದರು.
ಬರದಿಂದ ರೈತರು ಗುಳೆ ಹೋಗುತ್ತಿದ್ದಾರೆ. ಮೊದಲು ರೈತರು ಗುಳೆ ಹೋಗುವುದನ್ನು ತಡೆಯುವ ಪ್ರಯತ್ನ ಮಾಡಿ. ಈ ಸರ್ಕಾರ ಟೇಕಾಫ್ ಆಗಿಲ್ಲ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಬಜೆಟ್ ಗಾತ್ರವನ್ನು ಜಾಸ್ತಿ ಮಾಡಿದ್ದೀರಿ. ಇದರ ಜೊತೆಗೆ ತೆರಿಗೆಗಳನ್ನು ಹೆಚ್ಚು ಮಾಡಲಾಗುತ್ತಿದೆ. ಹಾಲಿನ ದರವನ್ನು ಏರಿಸಿದ್ದಿರಿ, ಆಲ್ಕೋಹಾಲ್ ದರವನ್ನು ಏರಿಕೆ ಮಾಡಿದ್ದೀರಿ. ಮಹಿಳೆಯರಿಗೆ ಕೊಡುವ 2 ಸಾವಿರ ರೂ.ಗಳನ್ನು ತೆರಿಗೆ ರೂಪದಲ್ಲಿ ಸರ್ಕಾರ ವಸೂಲಿ ಮಾಡುತ್ತಿದೆ ಎಂದರು.
ರೈತ ವಿದ್ಯಾನಿಧಿಯನ್ನು ನಮ್ಮ ಸರ್ಕಾರ ಮಾಡಿತ್ತು. ರೈತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಣ ಕೊಡಲಾಗುತ್ತಿತ್ತು. ಅದನ್ನು ರದ್ದು ಮಾಡಿದ್ದಿರಾ, ಈಗ ಮತ್ತೆ ಆರಂಭ ಮಾಡಬೇಕು. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ರೂ. ಕೊಡುತಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ 4 ಸಾವಿರ ಕೊಡುತ್ತಿದ್ದರು. ಅದನ್ನು ರದ್ದು ಮಾಡಿದ್ದಿರಾ, ರೈತ ವಿರೋಧಿಯಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಅದನ್ನು ಪ್ರಾರಂಭ ಮಾಡಬೇಕು. ಶಾಸಕರ ನೇತೃತ್ವದ ಟಾಸ್ಕ್ ಪೋರ್ಸ್‌ಗೆ ಐದು ಕೋಟಿ ರೂ. ಕೊಡಬೇಕು ಎಂದು ಒತ್ತಾಯಿಸಿದರು.
ಮಂತ್ರಿಗಳು ಗೈರು, ಬಿಜೆಪಿ ಕಿಡಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಬರದ ಬಗ್ಗೆ ಮಾತನಾಡುತ್ತಿದ್ದಾಗ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಎದ್ದುನಿಂತು, ಪ್ರತಿಪಕ್ಷದ ನಾಯಕರು ಬರದ ಬಗ್ಗೆ ಗಂಭೀರವಾದ ಚರ್ಚೆ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಸಂಬಂಧಪಟ್ಟ ಸಚಿವರೇ ಇಲ್ಲ. ಮುಖ್ಯಮಂತ್ರಿಗಳು, ಕೃಷಿ ಹಾಗೂ ತೋಟಗಾರಿಕೆ ಸಚಿವರೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಆರ್.ಅಶೋಕ್, ಸದನದಲ್ಲಿ ಬರದ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹುತೇಕ ಮಂತ್ರಿಗಳು ಹಾಜರಿಲ್ಲ. ಎಲ್ಲ ತೆಲಂಗಾಣಕ್ಕೆ ತೆರಳಿದ್ದಾರೆ. ಈ ಸರ್ಕಾರಕ್ಕೂ ಬರ ಬಂದಿದೆ ಎಂದು ಹರಿಹಾಯ್ದರು.
ಈ ಹಿಂದೆ ಪ್ರಕೃತಿ ವಿಕೋಪಗಳಾದಾಗ ನಾವು ಅಧಿಕಾರದಲ್ಲಿದ್ದೆವು. ಆಗ ಕೇಂದ್ರದ ನೆರವಿಗೆ ಕಾಯದೆ ಪರಿಹಾರ ಕೊಟ್ಟೆವು. ನೀವು ಆ ಕೆಲಸ ಮಾಡಿ ಕೇಂದ್ರದಿಂದ ಪರಿಹಾರ ಬಂದೆ ಬರುತ್ತದೆ ಎಂದು ಹೇಳಿದರು. ರಾಜ್ಯದ ಜನತೆ ಸಂಕಷ್ಟದ ಸಮಯದಲ್ಲಿರುವಾಗ ನೀವು ಸ್ಪಂದಿಸದಿದ್ದರೆ ಅವರ ಶಾಪ ನಿಮಗೆ ತಟ್ಟುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಿ, ಈ ಸಂದರ್ಭದಲ್ಲಿ ಬೀಚಿ ಅವರು ಹೇಳಿರುವ ಮಾತು ನೆನಪಿಗೆ ಬರುತ್ತಿದೆ, "ಪ್ರತಿಯೊಬ್ಬ ಜಾಣನಿಗೂ ಅಹಂಕಾರ ಇದ್ದೇ ಇರುತ್ತದೆ, ತಾನೊಬ್ಬ ಕೋಣನೆಂದು ತಿಳಿಯುವವರೆಗೂ" ಎಂದರು.
ಇದನ್ನೂ ಓದಿ:ಒಪಿಎಸ್ ಜಾರಿ ಕುರಿತು ರಚಿಸಲಾದ ಏಕಸದಸ್ಯ ಸಮಿತಿ 10 ದಿನದಲ್ಲಿ ಮರು ರಚನೆ: ಸಚಿವ ಕೃಷ್ಣ ಬೈರೇಗೌಡ