ಬೆಳಗಾವಿ: "ಕಾಂಗ್ರೆಸ್ ಗೂಂಡಾ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ" ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ಹಿಂದೆ 2013ರಿಂದ 2018ರವರೆಗೆ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಸುಮಾರು 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿತ್ತು" ಎಂದರು.
"ಈಗ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಕಲಬುರಗಿ, ಬೆಳಗಾವಿಯಲ್ಲಿ ಇದೇ ರೀತಿ ಆಗಿದೆ. ಮಂಗಳೂರು, ಉಡುಪಿಯಲ್ಲಿ ನಮ್ಮ ಇಬ್ಬರು ಹಿಂದೂ ಕಾರ್ಯಕರ್ತರನ್ನು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಗಡಿಪಾರು ಮಾಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ರೀತಿ ಗೂಂಡಾ ಪ್ರವೃತ್ತಿಯನ್ನು ತೋರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಅವರ ಗೂಂಡಾಗಿರಿ, ದೌರ್ಜನ್ಯಕ್ಕೆ ಬಿಜೆಪಿ ಬಗ್ಗಲ್ಲ. ವಿಧಾನಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡಿ ನಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡುತ್ತೇವೆ" ಎಂದು ಹೇಳಿದರು.
"ಪೊಲೀಸರು ಕಾಟಾಚಾರದ ಕೇಸ್ ಹಾಕಿದ್ದಾರೆ. ಕೊಲೆ ಯತ್ನ ಮತ್ತು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ದರೋಡೆ ಕೇಸ್ ಹಾಕಿಲ್ಲ. ಪೊಲೀಸರ ಮೇಲೆ ಮಂತ್ರಿಗಳು ಒತ್ತಡ ಹಾಕುತ್ತಿದ್ದಾರೆ. ಇದರ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡುತ್ತೇವೆ. ಪೊಲೀಸರಿಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ಈ ಸರ್ಕಾರವೇ ಪರ್ಮನೆಂಟ್ ಎಂದು ತಿಳಿದುಕೊಳ್ಳಬೇಡಿ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಇವು ಇದೇ ಸರ್ಕಾರದ ಪರವಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.