ಕರ್ನಾಟಕ

karnataka

By

Published : Jun 11, 2022, 10:48 PM IST

ETV Bharat / state

ರಾಷ್ಟ್ರಲಾಂಛನ ದುರ್ಬಳಕೆ ಆರೋಪ: ಬಸವರಾಜ್ ಹೊರಟ್ಟಿಗೆ ಶೋಕಾಸ್ ನೋಟಿಸ್

ರಾಷ್ಟ್ರ ಲಾಂಛನ ದುರ್ಬಳಕೆ ಆರೋಪದಡಿ ವಿಧಾನಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್​ ಹೊರಟ್ಟಿಗೆ ವಿವರಣೆ ಕೇಳಿ ಶನಿವಾರ ನೋಟಿಸ್‌ ಜಾರಿಯಾಗಿದೆ.

ಬಸವರಾಜ್ ಹೊರಟ್ಟಿಗೆ ಶೋಕಾಸ್ ನೋಟಿಸ್
ಬಸವರಾಜ್ ಹೊರಟ್ಟಿಗೆ ಶೋಕಾಸ್ ನೋಟಿಸ್

ಬೆಳಗಾವಿ:ರಾಷ್ಟ್ರ ಲಾಂಛನ ದುರ್ಬಳಕೆ ಆರೋಪದಡಿ ವಿಧಾನಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್​ ಹೊರಟ್ಟಿಗೆ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ವಿವರಣೆ ಕೇಳಿ ಶನಿವಾರ ಶೋಕಾಸ್ ನೋಟಿಸ್‌ ನೀಡಿದ್ದಾರೆ. ಸ್ವಂತ ಲಾಭಕ್ಕಾಗಿ ರಾಷ್ಟ್ರಲಾಂಛನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರಿನಡಿ ಕ್ರಮ ಜರುಗಿಸಲಾಗಿದೆ.

ಬಸವರಾಜ್​ ಹೊರಟ್ಟಿ ಕುರಿತಾಗಿ ಬರೆಯಲಾದ ಬಸವರಾಜ ಪಥ ಹಾಗೂ ಸಂಘರ್ಷ–ಹೋರಾಟ–ಸಾಧನೆ ಎಂಬ ಎರಡು ಪುಸ್ತಕಗಳಲ್ಲಿ ರಾಷ್ಟ್ರಲಾಂಛನ, ರಾಜ್ಯ ಲಾಂಛನ ಹಾಗೂ ವಿಧಾನಪರಿಷತ್‌ ಸಭಾಪತಿ ಪೀಠದ ಚಿತ್ರಗಳನ್ನು ಮುದ್ರಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಶುಕ್ರವಾರ ದೂರು ನೀಡಿದ್ದಾರೆ. ಇದನ್ನು ಪರಿಶೀಲಿಸಲಾಗಿ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಇದರ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ. ನೋಟಿಸ್‌ ಜಾರಿ ಮಾಡಿದ 24 ಗಂಟೆಯೊಳಗೆ ಉತ್ತರ ಕೊಡಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಸಮರ್ಪಕ ಉತ್ತರ ನೀಡದೇ ಇದ್ದರೆ ಶಿಸ್ತುಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಬಿಸ್ವಾಸ್ ತಿಳಿಸಿದ್ದಾರೆ.

ದಿ ಸ್ಟೇಟ್ ಎಂಬ್ಲಮ್‌ ಆಫ್ ಇಂಡಿಯಾ (ಪ್ರೊಹಿಬಿಷನ್‌ ಆಫ್‌ ಇಂಪ್ರಾಪರ್‌ ಯೂಸ್‌ ಆ್ಯಕ್ಟ್‌–2005) ಅಡಿ ವಿವರಣೆ ಕೇಳಲಾಗಿದೆ. ಅಲ್ಲದೇ, ಜನಪ್ರತಿನಿಧಿಗಳ ಕಾಯ್ದೆ (ರಿಪ್ರೆಸೆಂಟೇಷನ್‌ ಆಫ್‌ ಪೀಪಲ್ಸ್‌ ಆ್ಯಕ್ಟ್‌) ಅಡಿ ಕ್ರಮ ಜರುಗಿಸಲು ನಮಗೂ ಅವಕಾಶವಿದೆ. ಆಯೋಗದ ನಿರ್ದೇಶನ ನೋಡಿಕೊಂಡು ಮುಂದುವರೆಯಲಾಗುವುದು. ಜೊತೆಗೆ, ಈ ಪುಸ್ತಕಗಳನ್ನು ಪ್ರಕಟಿಸಿದ ಹುಬ್ಬಳ್ಳಿಯ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದವರಿಗೂ ನೋಟಿಸ್‌ ನೀಡಲಾಗಿದೆ ಎಂದು ಬಿಸ್ವಾಸ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details