ಬೆಳಗಾವಿ:ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಕೊಡುವ ವಸ್ತುಗಳೆಲ್ಲ ಸೇರಿ ಮೂರು ಸಾವಿರ ರೂಪಾಯಿ ಆಗಬಹುದು. ಆದರೆ ನಾವು ಆರು ಸಾವಿರ ಕೊಟ್ಟರೆ ವೋಟ್ ಹಾಕಿ ಎಂದು ಜಾರಕಿಹೊಳಿ ಹೇಳಿದ್ದರು. ಜಾರಕಿಹೊಳಿಯವರ ಈ ಹೇಳಿಕೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, "ಮತದಾರರಿಗೆ ಒಂದು ಮತಕ್ಕೆ ಆರು ಸಾವಿರ ರೂಪಾಯಿ ಹಂಚಿಕೆ ಮಾಡುತ್ತೇವೆ ಎಂದು ನನ್ನ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಹೇಳುತ್ತಾರೆ. ಅದರಷ್ಟು ಮೂರ್ಖತನದ ಕೆಲಸ ಮತ್ತೊಂದಿಲ್ಲ. ರಾಜ್ಯದಲ್ಲಿ ಚುನಾವಣೆ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದೆಲ್ಲವನ್ನೂ ಗಮನಿಸುತ್ತಿದ್ದಲ್ಲಿ ಈ ವಿಚಾರ ಅವರಿಗೆ ಬಿಟ್ಟಿದ್ದು" ಎಂದು ಹೇಳಿದರು.
"ಕೆಲವರು ನನ್ನ ಕ್ಷೇತ್ರದಲ್ಲಿ ಬಂದು ಹಣ ಹಂಚುತ್ತೇನೆಂದು ಬಹಿರಂಗವಾಗಿ ಆಮಿಷ ಒಡ್ಡುತ್ತಿದ್ದಾರೆ. ಆದರೆ ನನ್ನ ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ನನ್ನನ್ನು ಮನೆಮಗಳೆಂದು ಒಪ್ಪಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಇಂಥ ಯಾವುದೇ ಅಮಿಷಗಳಿಗೆ ಅವರು ಗಮನಕೊಡುವುದಿಲ್ಲ. 6 ಸಾವಿರ ರೂಪಾಯಿ ಕೊಟ್ಟು ಮತ ಪಡೆಯುತ್ತೇವೆ ಎಂದರೆ ಅದು ಅವರ ಮೂರ್ಖತನದ ಪರಮಾವಧಿ" ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಟೀಕಾ ಸಮರ ನಡೆಸಿದರು.
ಕೆಟ್ಟ ಹುಳವನ್ನು ಈ ಬಾರಿ ತೆಗೆಯಬೇಕೆಂಬ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, "ನಾನು ಇಡೀ ಬಿಜೆಪಿ ಪಕ್ಷವನ್ನು ಹೇಳುವುದಿಲ್ಲ. ಈ ಹಿಂದೆ ಜಾರಕಿಹೊಳಿ ಇದೇ ರೀತಿ ಹಗುರವಾಗಿ ಮಾತನಾಡಿದ್ದರು. ಅವರು ಒಬ್ಬ ಹೆಣ್ಣು ಮಗಳಿಗೆ ಈ ರೀತಿಯಾಗಿ ಮಾತಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಅಲ್ಲದೇ ಗ್ರಾಮೀಣ ಕ್ಷೇತ್ರದಲ್ಲಿ ಬಾರ್ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಹಾಗಿದ್ದಲ್ಲಿ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಅಧಿಕಾರಿಗಳು ಅವರ ಮಾತುಗಳನ್ನೇ ಕೇಳುತ್ತಾರೆ. ವರದಿ ತೆಗೆದುಕೊಂಡು ಹೋಗಿ ಮಾತನಾಡಲಿ" ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ:‘ಡಿ’ ಕಾಂಗ್ರೆಸ್ ಸೋಲಿಸಲು ‘ಎಸ್‘ ಕಾಂಗ್ರೆಸ್ 500 ಕೋಟಿ ರೂ ಡೀಲ್ ಮಾಡಿದೆ: ಆರ್.ಆಶೋಕ್