ಬೆಳಗಾವಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದರು. "ಈ ಪ್ರಶ್ನೆಯನ್ನು ನೀವು ನನ್ನ ಬಳಿ ಕೇಳಬಾರದು, ಸಾರ್ವಜನಿಕ ಹಿತಾಸಕ್ತಿ ಪ್ರಶ್ನೆಗಳಿಗೆ ಮಾತ್ರ ನಾನು ಉತ್ತರಿಸುವೆ. ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ವ್ಯಕ್ತಿತ್ವ ನನ್ನದಲ್ಲ" ಎಂದಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿ ನಡೆಯಲಿದ್ದ ಸಭೆಗೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳನ್ನು ಸರಿಪಡಿಸುವುದು, ಉನ್ನತೀಕರಣ, ವ್ಯವಸ್ಥೆ ಸುಧಾರಣೆ ಕುರಿತು ಗಮನಹರಿಸುತ್ತೇನೆ ಎಂದು ತಿಳಿಸಿದರು.
ಅವಕಾಶ ಕೊಟ್ಟರೆ ನಾನು ಸಿಎಂ ಆಗುತ್ತೇನೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ನೀವೇ ಅಪಾರ್ಥ ಮಾಡಿಕೊಂಡಿದ್ದೀರಿ. ಅವರಾಗಿಯೇ ಮಾಧ್ಯಮಗಳ ಎದುರು ಬಂದು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ, ಮಾಧ್ಯಮಗಳು ಪದೇ ಪದೇ ಪ್ರಶ್ನಿಸಿದಾಗ ಅವಕಾಶ ಸಿಕ್ಕರೆ ನಾನು ಸಿಎಂ ಆಗುತ್ತೇನೆ ಎಂದಿದ್ದಾರೆ ಅಷ್ಟೇ ಎಂದು ತಿಳಿಸಿದರು.
ನಮ್ಮ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಯಾವುದೇ ಶಾಸಕರಲ್ಲಿ ಅಸಮಾಧಾನ, ಭಿನ್ನಮತ ಇಲ್ಲ. ಈ ರಾಜ್ಯದ ಅಭಿವೃದ್ಧಿಯೇ ನಮ್ಮ ಪಕ್ಷದ ಧ್ಯೇಯ ಧೋರಣೆಯಾಗಿದೆ. ಹಾಗೆಯೇ, ಸಿಎಂ ನೇತೃತ್ವದ ಸಚಿವರ ಬ್ರೇಕ್‌ಫಾಸ್ಟ್ ಸಭೆಗೆ ನನಗೆ ಆಹ್ವಾನವೇ ಬಂದಿಲ್ಲ. ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಅದೂ ಅಲ್ಲದೇ, ಆರೋಗ್ಯ ಸಮಸ್ಯೆ ಇತ್ತು. ಹೀಗಾಗಿ ಸಿಎಂ ಕರೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ನಾನು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.