ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಜನ ಕೌಟುಂಬಿಕ ಸಂಬಂಧಗಳನ್ನೇ ಮರೆಯುತ್ತಿದ್ದಾರೆ. ಮೊಬೈಲೇ ಎಲ್ಲವೂ ಆಗಿದ್ದು, ಸಮಾಜ ಎತ್ತ ಸಾಗುತ್ತಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಇದಕ್ಕೆಲ್ಲಾ ಪರಿಹಾರ ಸೂಚಿಸಬೇಕೆಂದು ಬೆಳಗಾವಿಯಲ್ಲಿ ವಿಘ್ನ ವಿನಾಶಕ ಗಣಪನು ಮೊಬೈಲ್ ಕಾರ್ಕೊಟಕ ವಿಷವಿದ್ದಂತೆ. ಅದರಿಂದ ಹೊರ ಬನ್ನಿ ಎಂದು ಭಕ್ತರಿಗೆ ಎಚ್ಚರಿಸುತ್ತಿದ್ದಾರೆ.
ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎದ್ದ ಕ್ಷಣದಿಂದ ಹಿಡಿದು ಮಲಗುವವರೆಗೂ ಪ್ರತಿಯೊಂದು ಸಂದರ್ಭದಲ್ಲೂ ಮೊಬೈಲ್ ಇಲ್ಲದ ಜೀವನ ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಅಷ್ಟರಮಟ್ಟಿಗೆ ಇದು ಜನರಲ್ಲಿ ಹಾಸುಹೊಕ್ಕಾಗಿದೆ. ಇದರ ದುಷ್ಪರಿಣಾಮ ಕೌಟುಂಬಿಕ ಸಂಬಂಧಗಳ ಮೇಲಾಗುತ್ತಿದೆ. ಒಂದೇ ಮನೆಯಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಒಂದೊಂದು ಮೊಬೈಲ್ ಹಿಡಿದುಕೊಂಡು ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ. ಪರಸ್ಪರ ಮಾತಿಲ್ಲ, ಕಥೆ ಇಲ್ಲ. ಅಲ್ಲದೇ ವಿದ್ಯಾರ್ಥಿಗಳ ಭವಿಷ್ಯಕ್ಕೂ ಮಾರಕ. ಇದರಿಂದ ಇನ್ನು ಕಣ್ಣು ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇಷ್ಟೆಲ್ಲಾ ಅವಾಂತರ ಆಗುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇಂಥ ವಿಷಮ ಸ್ಥಿತಿಯಲ್ಲಿ ಪ್ರಥಮ ಪೂಜಿತ ಗಣಪ ತನ್ನ ಭಕ್ತರನ್ನು ಈ ಚಕ್ರವ್ಯೂಹದಿಂದ ಹೊರ ತರುವ ಪ್ರಯತ್ನ ಮಾಡಿದ್ದಾರೆ.
ಹೌದು, ಬೆಳಗಾವಿಯ ವಡಗಾವಿಯಲ್ಲಿರುವ ತೆಗ್ಗಿನಗಲ್ಲಿ ಜನತಾ ಚೌಕ್ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯವರು ಈ ರೀತಿಯ ವಿಶೇಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಗೂಗಲ್, ಯೂಟ್ಯೂಬ್, ಫೇಸ್ಬುಕ್, ವಾಟ್ಸಪ್, ಟ್ವಿಟರ್, ಇನ್ಸಟಾ, ಸ್ನಾಪ್ಚಾಟ್ ಬಳಕೆಯಲ್ಲಿ ಮಗ್ನರಾಗಿರುವ ಕುಟುಂಬವನ್ನು ಶ್ರೀ ಗಣೇಶ ಹಗ್ಗದ ಸಹಾಯದಿಂದ ಜಗ್ಗಿ, ಅವರ ಕೈಗೆ ಪುಸ್ತಕ ಕೊಡುತ್ತಿರುವ ಮೂರ್ತಿ ತುಂಬಾ ಅರ್ಥಪೂರ್ಣವಾಗಿದೆ. ಅಲ್ಲದೇ ಈ ಸಾಮಾಜಿಕ ಜಾಲತಾಣಗಳು ವಿಷಸರ್ಪವಿದ್ದಂತೆ, ಅವುಗಳಿಂದ ಹೊರ ಬರದಿದ್ದರೆ ನಿಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸುವ ರೀತಿಯಲ್ಲಿ ಗಣೇಶ ಮೂರ್ತಿ ತಯಾರಿಸಿದ್ದು, ಎಲ್ಲರಿಗೂ ಎಚ್ಚರಿಕೆ ಗಂಟೆ ಬಾರಿಸುವಂತೆ ಮಾಡಿದೆ.