ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಖಂಡನೀಯ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ಆಗ್ರಹಿಸಿದ್ದಾರೆ.
ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಹಣಕಾಸಿನ ವಿಚಾರದಲ್ಲಿ ಮುನಿಗಳ ಹತ್ಯೆ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ನಿರ್ವಾಣ ಮುನಿಗಳು ಕೈಯಲ್ಲಿ ದುಡ್ಡು ಹಿಡಿಯುವುದೇ ಇಲ್ಲ. ಇದು ವೈಚಾರಿಕ ಹತ್ಯೆಯಾಗಿದ್ದು, ವಿದೇಶಿ ಕುತಂತ್ರದ ಸಂಶಯ ಮೂಡಿದೆ. ಇವರೆಲ್ಲ ಯಾವ ರೀತಿ ಆಶ್ರಮಕ್ಕೆ ಬರುತ್ತಾರೆ ಅನ್ನೋದು ಗೊತ್ತಾಗಲ್ಲ. ಚಾಲಕರಾಗಿ, ಸೇವಕರಾಗಿಯೂ ಬರುವ ಸಾಧ್ಯತೆಯಿದೆ. ಹಾಗಾಗಿ ತನಿಖೆ ಅಡ್ಡದಾರಿ ಹಿಡಿಯಬಾರದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಜೂನ್ 17ರಂದು ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರ ಖಂಡಿಸಲು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಶಿವಾಪುರದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಅವರ ಕಾರು ಕಾಕತಿ ಬಳಿ ಅಪಘಾತವಾಗಿತ್ತು. ಇದರಲ್ಲಿ ಇಬ್ಬರು ಸಾವನ್ನಪ್ಪಿ, ಸ್ವಾಮೀಜಿ ಕೂಡ ತೀವ್ರವಾಗಿ ಗಾಯಗೊಂಡಿದ್ದರು. ಗೋವುಗಳ ರಕ್ಷಣೆ ಮಾಡುವ ಸ್ವಾಮೀಜಿಗೆ ಅಪಘಾತವಾದರೂ ಅವರಿಗೆ ಪರಿಹಾರ ಕೊಡಲು ಸರ್ಕಾರ ಮನಸ್ಸು ಮಾಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಹಿಂದೂ 11 ರೂಪಾಯಿ ಜಮಾ ಮಾಡಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡೋಣ ಎಂದು ಕೃಷ್ಣ ಭಟ್ ಹೇಳಿದರು.
ಗಣೇಶಪುರದ ರುದ್ರಕೇಸರಿ ಮಠದ ಹರಿಗುರು ಮಹಾರಾಜ ಮಾತನಾಡಿ, ಸಾಧು, ಸಂತರ ಹತ್ಯೆ ಮಾಡಿ ವಿಕೃತಿ ಮೆರೆದರೆ ಹಿಂದೂತ್ವ ನಾಶವಾಗಲ್ಲ. ಎಲ್ಲ ಸಾಧು, ಸಂತರು ಮಠಗಳನ್ನು ಬಿಟ್ಟು ಹಿಂದುತ್ವ ಕಟ್ಟಲು ಹೊರಗಡೆ ಬಂದು ಹೋರಾಡಬೇಕು. ಬರುವ ದಿನಗಳಲ್ಲಿ ಹಿಂದುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಹಿಂದುಗಳು ಮನೆಯಲ್ಲಿ ಕುಳಿತುಕೊಂಡರೆ ಹಿಂದು ಧರ್ಮ ಉಳಿಯುವುದಿಲ್ಲ, ನಾವೆಲ್ಲಾ ಜಾಗೃತರಾಗಬೇಕು ಎಂದು ಕರೆ ನೀಡಿದರು.